ಗಲಭೆ: ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ
ಲಕ್ಷ್ಮೇಶ್ವರ: ಶಾಂತಿ, ಸಹಬಾಳ್ವೆ, ಕೋಮುಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಜರುಗಿದ ಅಹಿತಕ ಘಟನೆ ವಿಷಾದದ ಸಂಗತಿಯಾಗಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಶರಣಪ್ಪ ಎಸ್.ಡಿ. ಹೇಳಿದರು.
ಶನಿವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ಮಧ್ಯೆ ನಡೆದ ಗಲಭೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದಂತೆ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಶುಕ್ರವಾರದ ಘಟನೆಯಿಂದ ಎಲ್ಲರ ಮನಸ್ಸಿಗೆ ನೋವಾಗಿದ್ದು, ಯಾವುದೇ ಧರ್ಮದವರು ಬೇರೆ ಧರ್ಮದವರು ನಡೆಸುವ ಹಬ್ಬಗಳಿಗೆ ಸಹಕಾರ ನೀಡುವ ಮೂಲಕ ಸಹಬಾಳ್ವೆ ನಡೆಸಬೇಕಾಗಿದೆ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳುವುದರ ಜತೆಗೆ ಅಮಾಯಕರು ಈ ಘಟನೆಯಲ್ಲಿ ಸಿಲುಕದಂತೆ ಕಾಳಜಿವಹಿಸಲಾಗುವುದು.
ಶಾಂತಿ ಕಾಪಾಡಿ: ಎಲ್ಲ ಧರ್ಮದವರಿಗೂ ಒಂದೇ ರೀತಿಯ ಕಾನೂನು ಇದ್ದು, ಅದಕ್ಕೆ ತಕ್ಕಂತೆ ಎಲ್ಲರೂ ನಡೆದುಕೊಳ್ಳಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರಿಗೆ ಕಾನೂನು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ ಅವರು, ಇನ್ಮುಂದೆ ಗಜಾನೋತ್ಸವ ಸಮಿತಿಗಳು ಜವಾಬ್ದಾರಿಯಿಂದ ನಡೆದುಕೊಳ್ಳುವುದಲ್ಲದೆ, ಪಟ್ಟಣದ ಹಿರಿಯರ ಸಹಭಾಗಿತ್ವದಲ್ಲಿ ಶಾಂತಿಯುತವಾಗಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ನಿಗದಿತ ಅವಧಿಯಲ್ಲಿ ಪೂರೈಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಅಮಾಯಕರು ಬಲಿಯಾಗದಿರಲಿ: ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ್ ಮತ್ತು ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಪ್ರಸ್ತುತ ಯಾವುದೇ ಧರ್ಮದ ಆಚರಣೆಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕಾರ್ಯಕ್ಕೀಳಿದಿರುವುದು ವಿಷಾದದ ಸಂಗತಿಯಾಗಿದೆ. ಶುಕ್ರವಾರ ನಡೆದ ಘಟನೆಯಲ್ಲಿ ಯಾವುದೇ ಅಮಾಯಕರನ್ನು ಸಿಲುಕಿಬಾರದು ಎಂದು ಎಸ್ಪಿಯವರಿಗೆ ಮನವಿ ಮಾಡಿದರು.
ಈ ಸಂದರ್ಭ ಪಟ್ಟಣದ ಅಂಜುಮನ್ ಸಂಸ್ಥೆ ಅಧ್ಯಕ್ಷ ಗೌಸುಸಾಬ್ ಕಾರಡಗಿ, ಪುರಸಭೆ ಮಾಜಿ ಅಧ್ಯಕ್ಷ ಜಯಕ್ಕ ಕಳ್ಳಿ, ಎನ್.ಜಿ. ಹೊಂಬಳ, ಸೋಮಣ್ಣ ಮುಳಗುಂದ, ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ಡಿವೈಎಸ್ಪಿ ವಿ.ವಿ. ಕುಂಬಾರ, ಸುಲೆಮಾನ ಕಣಕೆ, ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ, ಸಿಪಿಐ ಪ್ರಕಾಶ ನಾಯ್ಡು, ನಾಗರಾಜ ಅಂಬಲಿ, ಪಿಎಸ್ಐ ವಿಕಾಸ ಲಮಾಣಿ, ಚಂಬಣ್ಣ ಬಾಳಿಕಾಯಿ, ಸಿದ್ದನಗೌಡ್ರ ಬಳ್ಳೊಳ್ಳಿ, ಎಂ.ಎಂ. ಅಗಡಿ ಇತರರು ಪಾಲ್ಗೊಂಡಿದ್ದರು.
--
ಗದಗ ಉತ್ಸವದಲ್ಲಿ ಫ್ಯಾಶನ್ ಶೋ
ಗದಗ: ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಆಯೋಜಿಸಲಾಗಿದ್ದ ಗದಗ ಉತ್ಸವ-2013ರಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಅಂಗವಾಗಿ ನಡೆದ ಫ್ಯಾಶನ್ ಶೋ ಎಲ್ಲರ ಗಮನ ಸೆಳೆಯಿತು. ಕೆಎಲ್ಸಿ ಸಂಸ್ಥೆಯ 2ನೇ ತರಗತಿಯ ವಿದ್ಯಾರ್ಥಿನಿ ಫಲಕ ಜೈನ ಪ್ರಥಮ ಬಹುಮಾನ ಪಡೆದರು. ನಿರ್ಣಾಯಕರಾಗಿ ಸುಗಲಾ ಯಳಮಲಿ ಹಾಗೂ ವೆಂಕಟೇಶ ಆಗಮಿಸಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ಬಹುಮಾನ ಮತ್ತು ನೆನಪಿನ ಕಾಣಿಕೆ ವಿತರಿಸಿದರು. ಸಂಗಮೇಶ ದುಂದೂರ, ವಿಜಯಕುಮಾರ ಹಿರೇಮಠ, ಪದಾಧಿಕಾರಿಗಳು ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.