ಭಕ್ತರ ಮನದಲ್ಲಿ ಪುಟ್ಟರಾಜರು ಚಿರಪೂಜ್ಯರು
ಗದಗ: ಲಿಂ. ಪುಟ್ಟರಾಜ ಕವಿ ಗವಾಯಿಗಳು ಯುಗದ ನಡೆದಾಡುವ ದೇವರಾಗಿದ್ದು, ನಿತ್ಯ ಭಕ್ತರ ಮನದಲ್ಲಿ ಪೂಜೆಗೊಳ್ಳುವ ಮೂಲಕ ಚಿರಪೂಜ್ಯರಾಗಿದ್ದಾರೆ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.
ಶನಿವಾರ ಸಂಜೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಡಾ ಪುಟ್ಟರಾಜ ಕಲಾಸಂಘ ಹಾಗೂ ಜಿಲ್ಲಾ ಕೃಷಿ ಉಪಕರಣಗಳ ತಯಾರಕರ ಮತ್ತು ವಿತರಕರ ಸಂಘದ ಆಶ್ರಯದಲ್ಲಿ ನಡೆದ ಲಿಂ. ಶಿವಯೋಗಿ ಡಾ ಪಂ. ಪುಟ್ಟರಾಜ ಕವಿ ಗವಾಯಿಗಳವರ ತೃತೀಯ ಸ್ವರಗಾನ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಸಂದೇಶ ನೀಡಿದರು: ಅಂಧ, ಅನಾಥ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ನಾಡಿಗೆ ಅನೇಕ ಸಂಗೀತ ದಿಗ್ಗಜರನ್ನು ನೀಡಿದ ಕೀರ್ತಿ ಪುಟ್ಟರಾಜ ಗವಾಯಿಗಳಿಗೆ ಸಲ್ಲುತ್ತದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯುವಲ್ಲಿ ಪುಟ್ಟರಾಜರು ಪ್ರಮುಐಖ ಪಾತ್ರ ವಹಿಸಿದ್ದರು.
ನಿರಂತರ ಸ್ಮರಣೆಯಾಗಲಿ: ನಾವು ಕಣ್ಣಿಗೆ ಕಾಣದ ದೇವರನ್ನು ಪೂಜಿಸುತ್ತೇವೆ. ಆದರೆ, ಪುಟ್ಟರಾಜರು ಭಕ್ತ ಸಮೂಹದ ಮಧ್ಯ ಇದ್ದು, ಭಕ್ತರ ಉದ್ಧಾರಕ್ಕಾಗಿ ಜೀವನ ಸವೇಸಿದ್ದಾರೆ. ಹಾಗಾಗಿ ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಎಂದರು. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ನಿರಂತರವಾಗಿ ಪ್ರತಿವರ್ಷ ಹಮ್ಮಿಕೊಳ್ಳುವ ಮೂಲಕ ನಿಜ ದೇವರ ಸ್ಮರಿಸುವಂತಹ ಕಾರ್ಯವಾಗಬೇಕಿದೆ ಎಂದರು.
ಶೀಘ್ರ ಸ್ಮಾರಕ ಭವನ ನಿರ್ಮಾಣ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಯಾವುದೇ ಸಂಗೀತ ವಿಶ್ವವಿದ್ಯಾಲಯ ಮಾಡದಂಥ ಕಾರ್ಯ ಮಾಡಿರುವ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಶ್ರೀಗಳ ಕಾರ್ಯ ಶ್ಲಾಘನೀಯ. ಇಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ಗಮನಕ್ಕೆ ಬಂದಿದ್ದು, ತಮ್ಮೆಲ್ಲ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಈ ವರ್ಷದ ತನ್ನ ಆಯವ್ಯಯದಲ್ಲಿ ಮಹತ್ವ ನೀಡಲಿದ್ದು, ಅನುದಾನ ಒದಗಿಸಲಿದೆ. ರಾಜ್ಯ ಸರ್ಕಾರ ಶೀಘ್ರ ಪುಟ್ಟರಾಜ ಗವಾಯಿಗಳವರ ಸ್ಮಾರಕ ಭವನ ನಿರ್ಮಾಣದ ಕುರಿತು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಅದ್ಭತವಾಗಿ ನಿರ್ಮಾಣವಾಗಲಿರುವ ಸ್ಮಾರಕ ಭವನ ಪುಟ್ಟರಾಜ ಗವಾಯಿಗಳವರ ನಿರಂತರ ಜೀವಂತಿಕೆಗೆ ಸ್ಪೂರ್ತಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊಸಳ್ಳಿಯ ಶ್ರೀಗಳು, ಬಸವರಾಜ ಶ್ರೀ, ಸದಾಶಿವ ಶ್ರೀ, ಚನ್ನವೀರ ಶ್ರೀಗಳು, ಪಂಚಾಕ್ಷರ ಶಿವಾಚಾರ್ಯರು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ನೇತೃತ್ವ ವಹಿಸಿದ್ದರು. ಇದೇ ಸಂದರ್ಭ ಹಲವರನ್ನು ಸನ್ಮಾನಿಸಲಾಯಿತು. ಲಾಲಹುಸೇನ್ ಕಂದಗಲ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿ.ಎಸ್. ಶಶಿಧರ, ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಶಿವರಾಜ ಸಜ್ಜನರ, ಶ್ರೀಶೈಲಪ್ಪ ಬಿದರೂರ, ಕುಮಾರಸ್ವಾಮಿ ಹಿರೇಮಠ, ವೀರೇಶ ಕಿತ್ತೂರ, ಕೆ.ಐ. ಶೇಖ್, ಶಂಭುಲಿಂಗಯ್ಯ ಕಲ್ಮಠ, ಶಿದ್ಧಲಿಂಗೇಶ ಮೂರಶಿಳ್ಳಿನ, ಬಸವಣ್ಣಯ್ಯ ಹಿರೇಮಠ, ಚನ್ನಬಸನಗೌಡ ದೊಡ್ಡಗೌಡ್ರ, ಕೃಷ್ಣಾ ರಾಠೋಡ ಇತರರಿದ್ದರು. ಶಿವಲಿಂಗ ಶಾಸ್ತ್ರೀ ಹಿರೇಮಠ ನಿರೂಪಿಸಿ, ವಂದಿಸಿದರು.