ಮುಸ್ಲಿಂ ಮನೆಯಲ್ಲಿ ಗಣೇಶೋತ್ಸವ!
ಕನ್ನಡಪ್ರಭ ವಾರ್ತೆ, ಗದಗ, ಸೆ. 15
ಗಣೇಶನನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ವಿಶೇಷ ಪೂಜೆ ಮಾಡಿ ನಂತರ ವಿಸರ್ಜನೆ ಮಾಡುವ ಮೂಲಕ ಮನುಕುಲವೆಲ್ಲ ಒಂದೇ ಎನ್ನುವುದನ್ನು ಸಾರುತ್ತಿರುವ ಬಡ ಮುಸ್ಲಿಂ ಕುಟುಂಬವೊಂದು ಗದಗನ ಎಸ್.ಎಂ. ಕೃಷ್ಣ ನಗರದ ಆಶ್ರಯ ಕಾಲೋನಿಯಲ್ಲಿದೆ.
ಈ ಕುಟುಂಬ ಕಳೆದ ಕೆಲ ದಿನಗಳಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಅನ್ವರ್ಭಾಷಾ ಹಾಗೂ ಅವರ ತಾಯಿ ಬೀಬಿಜಾನ್ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದು, ಈ ಕುಟುಂಬದಿಂದ ಗಣೇಶೋತ್ಸವ ಆಚರಣೆ ನಡೆದುಕೊಂಡು ಬಂದಿದ್ದೇ ಒಂದು ವಿಶೇಷ.
ಏನಿದು ವಿಶೇಷ..?
ಮೂಲತಃ ಗದಗ ನಗರದ ಕುಷ್ಟಗಿ ಚಾಳ್ ನಿವಾಸಿಯಾಗಿದ್ದ ಈ ಕುಟುಂಬ, ಕೆಲ ವರ್ಷಗಳ ನಂತರ ಎಸ್.ಎಂ. ಕೃಷ್ಣ ನಗರದಲ್ಲಿ ಆಶ್ರಯ ಕಾಲೋನಿಯಲ್ಲಿ ಸರ್ಕಾರ ನೀಡಿದ ಮನೆಯಲ್ಲಿ ವಾಸವಾಗಿದೆ. ಅನ್ವರ್ಭಾಷಾ ಕೂಲಿ ಕೆಲಸಕ್ಕೆಂದು ಹೋದ ಸಂದರ್ಭ ಅವನಿಗೆ ಗಣೇಶ ವಿಗ್ರಹವೊಂದು ದೊರೆತಿದೆ. ಅದನ್ನು ಮನೆಗೆ ತೆಗೆದುಕೊಂಡು ಹೋದ ಅನ್ವರ್ಭಾಷಾ ಈ ವಿಗ್ರಹ ಯಾರದೆಂದು ಎಲ್ಲರನ್ನೂ ಕೇಳಿದ್ದಾನೆ. ಆದರೆ, ಯಾರೂ ಅದು ನಮ್ಮದಲ್ಲ ಎಂದು ಹೇಳಿದರಂತೆ ಆಗ ಅವನೇ ಆ ವಿಗ್ರಹ ತನ್ನ ಮನೆಯಲ್ಲಿಟ್ಟಿದ್ದಾನೆ.
1996ರಲ್ಲಿ ಅಪಘಾತ
ಈ ಎಲ್ಲ ಬೆಳವಣಿಗೆಯ ನಂತರ 1996ರಲ್ಲಿ ಅನ್ವರ್ ಭಾಷಾ ಅವರಿಗೆ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಅನ್ವರ್ಭಾಷಾ ತಮ್ಮ ದೃಷ್ಟಿಯನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯ ಹಿರಿಯ ವೈದ್ಯರು ಮರಳಿ ದೃಷ್ಟಿ ಬರುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ಆಗ ಆತಂಕಗೊಂಡ ಅನ್ವರ್ಭಾಷಾ ಪತ್ನಿ ಹಾಗೂ ಅವರ ತಾಯಿ ಎಲ್ಲ ದೇವರ ಮೊರೆ ಹೋಗಿ, ಕೊನೆಗೆ ಮನೆಯಲ್ಲಿಯೇ ಇದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಮಾಡಿದ್ದಾರೆ. ಇನ್ನೈದು ದಿನದಲ್ಲಿ ನನ್ನ ಮಗನ ಕಣ್ಣಿನ ಆಪರೇಷನ್ ಇದೆ. ಅವನಿಗೆ ಮರಳಿ ದೃಷ್ಟಿ ಬಂದಲ್ಲಿ ಪ್ರತಿ ವರ್ಷವೂ ನಿನ್ನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದಾಗಿ ಬೇಡಿಕೊಂಡಿದ್ದಾರೆ.
ಈಡೇರಿದ ಬೇಡಿಕೆ
ಕಣ್ಣಿನ ಆಪ್ರೇಷನಗೆ ಹೋಗುವ ದಿನದಂದೂ ಮನೆಯಲ್ಲಿನ ಗಣೇಶನನ್ನು ಪ್ರಾರ್ಥಿಸಿ ತೆರಳಿದ್ದಾರೆ. ವೈದ್ಯ ಲೋಕಕ್ಕೆ ಅಚ್ಚರಿಯಾಗುವಂತೆ ಅನ್ವರ್ಭಾಷಾ ಅವರಿಗೆ ಮರಳಿ ದೃಷ್ಟಿ ಬಂದಿದೆ. ಮೊದ ಮೊದಲು ಸಣ್ಣಗೆ ಪ್ರಾರಂಭವಾದ ದೃಷ್ಟಿ ಈಗ ಸಂಪೂರ್ಣ ಮೊದಲಿನಂತಾಗಿದೆ. ಇದರಿಂದ ಖುಷಿಯಾದ ಅನ್ವರ್ಭಾಷಾ ಪತ್ನಿ ಹಾಗೂ ತಾಯಿ ಸಿಕ್ಕಿರುವ ಗಣೇಶ ವಿಗ್ರಹದೊಂದಿಗೆ ಮತ್ತೊಂದು ಹೊಸ ವಿಗ್ರಹ ತಂದು ಮನೆಯಲ್ಲಿ ಪ್ರತಿ ವರ್ಷ ಗಣೇಶ ಪ್ರತಿಷ್ಠಾಪನೆಯ ದಿನದಂದು ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ, ಏಕತೆ ಹಾಗೂ ಭಕ್ತಿಗೆ ಜಾತಿಯ ಮಿತಿ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ.
ಹಿಂದೂ ಸಂಪ್ರದಾಯದಂತೆ
ಗಣೇಶ ಪ್ರತಿಷ್ಠಾಪನೆಯೊಂದಿಗೆ ಹಿಂದೂ ಧರ್ಮದ ಸಂಪ್ರದಾಯದಂತೆ ಪ್ರತಿ ದಿನವೂ ಗಣೇಶನಿಗೆ ವಿಶೇಷ ಪೂಜೆ, ಅಲಂಕಾರ, ಆರತಿ, ಮಂಗಳಾರತಿಯನ್ನು ಮಾಡುತ್ತಾರೆ. ಗಣೇಶ ಪ್ರತಿಷ್ಠಾಪನೆಯ 11 ದಿನಗಳ ಕಾಲ ಮನೆಯಲ್ಲಿ ಮಾಂಸಾಹಾರಕ್ಕೆ ಆಸ್ಪದವಿಲ್ಲ. ಮನೆಯಲ್ಲಿರುವ ಪ್ರತಿಯೊಬ್ಬರೂ ಬೇರೆಡೆಯೂ ಮಾಂಸಾಹಾರ ತಿನ್ನುವುದಿಲ್ಲ. ಬದಲಾಗಿ ಮನೆಯಲ್ಲಿ ಪ್ರತಿ ದಿನವೂ ಗಣೇಶನಿಗೆ ಇಷ್ಟವಾದ ಸಿಹಿ ಭೋಜನಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ.
ಕೋಮು ಸೌಹಾರ್ದತೆ
ಕೋಮು ಸೌಹಾರ್ದಕ್ಕೆ ಗದಗ-ಬೆಟಗೇರಿ ಅವಳಿ ನಗರ ಹೆಸರು ವಾಸಿಯಾಗಿದೆ. ಇಲ್ಲಿ ಹಿಂದೂ ಮುಸ್ಲಿಂ ಎಲ್ಲ ದೇವಾಲಯಗಳು ಒಂದೇ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು ದೇಶದಲ್ಲಿಯೇ ವಿಶೇಷ. ಇಂತಹ ನಗರದಲ್ಲಿ ಮುಸ್ಲಿಂ ಕುಟುಂಬದಿಂದ ಗಣೇಶನನ್ನು ಪೂಜಿಸುತ್ತಿರುವುದು ಸೌಹಾರ್ದ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿದಂತಾಗಿದೆ. ದೇಶದ ಅಲ್ಲಲ್ಲಿ ಸೌಹಾರ್ದತೆ ಕದಡುವ ಪ್ರಯತ್ನಗಳು ಜರುಗುತ್ತಿರುವ ಸಂದರ್ಭ ಅಲ್ಲಾ, ಅಲ್ಲಮ ಒಂದೇ ಎಂಬ ಶರಣರ ನಾಣ್ಣುಡಿ ಇಲ್ಲಿ ನಿಜವಾಗಿದೆ.
-ಶಿವಕುಮಾರ ಕುಷ್ಟಗಿ