ಮೂಲಸೌಲಭ್ಯಕ್ಕಾಗಿ ದಿಂಡೂರು ಗ್ರಾಮಸ್ಥರ ಪ್ರತಿಭಟನೆ
ಗಜೇಂದ್ರಗಡ: ಸಮರ್ಪಕ ಕುಡಿವ ನೀರು, ರಸ್ತೆ, ಚರಂಡಿ ಇತರ ಮೂಲಸೌಲಭ್ಯ ಒದಗಿಸುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಭಾನುವಾರ ಸಮೀಪದ ದಿಂಡೂರು ಗ್ರಾಮದ ಹಿಂದುಳಿದ ಜನಾಂಗ ವಾಸಿಸುವ ಅಂಬೇಡ್ಕರ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದರು.
ರಾಜೂರು ಗ್ರಾಪಂ ವ್ಯಾಪ್ತಿಗೊಳಪಡುವ ದಿಂಡೂರು ಗ್ರಾಮದ ದಲಿತರಿಗೆ ಗ್ರಾಪಂ ಸೂಕ್ತ ಸೌಕರ್ಯ ಒದಗಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಸ್ವತಃ ಗ್ರಾಪಂ ಅಧ್ಯಕ್ಷ ಕಳಕಪ್ಪ ಕಂಬಳಿ ಅವರು ಗ್ರಾಮದವರಾದರೂ ದಲಿತರಿಗೆ 15 ವರ್ಷದಿಂದ ಸರ್ಕಾರದ ಒಂದು ಯೋಜನೆಯ ಫಲ ಸಿಕ್ಕಿಲ್ಲ. ದಲಿತರು ವಾಸಿಸುವ ಓಣಿಯಲ್ಲಿ ಸಮರ್ಪಕ ಕುಡಿವ ನೀರು ರಸ್ತೆ, ಗಟಾರು ವ್ಯವಸ್ಥೆಯಿಲ್ಲದೆ ಮನೆಯ ಮೊರಿಯ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಜನ ಸಂಚರಿಸುವ ರಸ್ತೆಗಳು ಕೆಸರು ತುಂಬಿದ ಗುಂಡಿಗಳಾಗಿ ಮಾರ್ಪಟ್ಟಿವೆ. ಇದರಿಂದ ಜನತೆ ಮೂಗು ಮುಚ್ಚಿಕೊಂಡು ನಡೆದಾಡುವ ಸ್ಥಿತಿ ಬಂದೊದಗಿದೆ ಎಂದು ದೂರಿದರು.
ದಲಿತ ಕೇರಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳ ಗುಡ್ಡೆ, ರಸ್ತೆ ಪಕ್ಕದಲ್ಲಿ ಕಲುಷಿತವಾದ ತಿಪ್ಪೆ ಗುಂಡಿಗಳು, ಚರಂಡಿ ವ್ಯವಸ್ಥೆ ಇಲ್ಲದೇ ಗಲೀಜು ನೀರೆಲ್ಲ ರಸ್ತೆ ಮೇಲೆ ನಿಂತು ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದ್ದನ್ನು ಕಂಡು ಕಾಣದಂತೆ ವರ್ತಿಸುತ್ತಿರುವ ಗ್ರಾಪಂ ಆಡಳಿತ ವ್ಯವಸ್ಥೆ ಬಗ್ಗೆ ಅನುಮಾನಗಳು ಮೂಡಿವೆ. ಸರ್ಕಾರ ಗ್ರಾಮಗಳ ಶುಚಿತ್ವ ಕಾಪಾಡಲು ಹಾಗೂ ಗ್ರಾಮಸ್ಥರ ಆರೋಗ್ಯ ರಕ್ಷಣೆ, ನೈರ್ಮಲ್ಯಕ್ಕಾಗಿ ಗ್ರಾಪಂ ಮೂಲಕ ಲಕ್ಷಾಂತರ ಹಣ ವೆಚ್ಚ ಮಾಡುತ್ತಿದೆ. ಆದರೆ, ಅಂತಹ ಯೋಜನೆಗಳ ಫಲ ಜನತೆಗೆ ತಲುಪುವುದಿಲ್ಲ ಎಂಬುದಕ್ಕೆ ಅಂಬೇಡ್ಕರ ಬಡಾವಣೆ ಚಿತ್ರಣವೇ ಸಾಕ್ಷಿಯಾಗಿವೆ ಎಂದು ನಿವಾಸಿಗಳು ಸ್ಥಳೀಯ ಆಡಳಿತ ಕಾರ್ಯವೈಖರಿ ಬಗ್ಗೆ ಟೀಕಿಸಿದರು.
ಇಲ್ಲಿನ ಅವ್ಯವಸ್ಥೆ ಕುರಿತು ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೆ ದಲಿತ ಕೇರಿಗೆ ಮೂಲಸೌಲಭ್ಯ ಜತೆಗೆ ಸರ್ಕಾರದಿಂದ ಹಿಂದುಳಿದ ಸಮುದಾಯಗಳಿಗೆ ನೀಡಿರುವ ಎಲ್ಲ ಸೌಲಭ್ಯಗಳನ್ನು ಒದಗಿಸದಿದ್ದಲ್ಲಿ ಸಮುದಾಯದಿಂದ ತಾಲೂಕು ಆಡಳಿತ ಕಚೇರಿ ಮುಂದೆ ಅಮರಣಾಂತ ಸತ್ಯಾಗ್ರಹಕ್ಕೆ ಮುಂದಾಗುತ್ತೇವೆ ಎಂದು ಕರಿಯಪ್ಪ ಮಾದರ, ಯಮನೂರ ಮಾದರ, ಮಲ್ಲಪ್ಪ ಮಾದರ, ಸುರೇಶ ದೊಡ್ಡಮನಿ, ಹುಲ್ಲಪ್ಪ ಮಾದರ, ಅಡಿವೆಪ್ಪ ಮಾದರ, ಕಳಕಪ್ಪ ಮಾದರ, ರೇಣಪ್ಪ ಮಾದರ, ಶರಣಪ್ಪ ಮಾದರ, ಮಲ್ಲಪ್ಪ ಮಾದರ, ಯಲ್ಲಮ್ಮ ಮಾದರ, ನಾಗವ್ವ ಮಾದರ, ಯಮನವ್ವ ಮಾದರ, ಅಡಿವೆವ್ವ ಮಾದರ, ಬಸವ್ವ ಮಾದರ, ಹುಲಿಗೆವ್ವ ಮಾದರ, ಮುದಕವ್ವ ಮಾದರಎಚ್ಚರಿಸಿದ್ದಾರೆ.