ವಿದ್ಯಾರ್ಥಿಗಳು ವ್ಯವಹಾರಿಕ ಜ್ಞಾನ ಬೆಳೆಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ಗದಗ, ಸೆ. 15
ಪಠ್ಯಪುಸ್ತಕ ಜ್ಞಾನದ ಜತೆಗೆ ವಿದ್ಯಾರ್ಥಿಗಳು ವ್ಯವಹಾರ ಜ್ಞಾನ ಪಡೆಯಬೇಕು. ಬಸವಣ್ಣನವರ ವಚನಗಳು ವಿದ್ಯಾರ್ಥಿ ಜೀವನಕ್ಕೆ ಮಾರ್ಗ ಸೂಚಿಗಳಾಗಿವೆ ಎಂದು ಚಾರ್ಟರ್ಡ್ ಅಕೌಂಟಂಟ್ ಕೆ.ಎಸ್. ಚೆಟ್ಟಿ ಹೇಳಿದರು.
ಅವರು ಈಚೆಗೆ ನಗರದ ಜ. ತೋಂಟದಾರ್ಯ ಶಿಕ್ಷಣ ಸಂಸ್ಥೆಯ ತೋಂಟದಾರ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ವಿದ್ಯಾರ್ಥಿಗಳಿಗೆ ವಚನ ವಿಶ್ಲೇಷಣೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕೃತಿ-ಸಂಸ್ಕಾರದಿಂದ ನಡೆಯಬೇಕು. ಕಠಿಣವಾದ ವಿಷಯವನ್ನು ವಚನಗಳನ್ನು ಅಧ್ಯಯನ ಮಾಡುವುದರ ಮೂಲಕ ಸರಳೀಕರಣ ಮಾಡಿಕೊಳ್ಳಬಹುದು. ಆದ್ದರಿಂದ ವಿದ್ಯಾರ್ಥಿಗಳಿಗೆ ವಚನಗಳು ಬಹಳ ಮುಖ್ಯ. ಪ್ರತಿಯೊಂದು ವಚನಗಳು ಅರ್ಥಗರ್ಭಿತವಾಗಿರುತ್ತವೆ. ವಿದ್ಯಾರ್ಥಿಗಳಿಗೆ ಇಂತಹ ಸ್ಪರ್ಧೆ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರ್ಮನ್ ದಾನಪ್ಪ ತಡಸದ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಭಾಗದ ಪರಿವೀಕ್ಷಕ ದಾಸರ ಮಾತನಾಡಿದರು.
ಸಂಸ್ಥೆಯ ಸದಸ್ಯ ಅಮರೇಶ ಅಂಗಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವೃತ್ತಿ ಶಿಕ್ಷಣ ವಿಭಾಗದ ಪರಿವೀಕ್ಷಕ ಆರ್.ಎಸ್. ತ್ರಿಮಲ್ಲೆ ಮುಂತಾದವರು ಉಪಸ್ಥಿತರಿದ್ದರು. ನಾಗರಾಜ ಗಾಳಿ ಸ್ವಾಗತಿಸಿದರು. ಕೊಟ್ರೇಶ ಮೆಣಸಿನಕಾಯಿ ನಿರೂಪಿಸಿದರು.
--