ಹವಾಮಾನ ಬೆಳೆವಿಮೆ ಕೊಡದಿದ್ದರೆ ಹೋರಾಟ
ನರಗುಂದ: 5 ವರ್ಷದ ಹಿಂದೆ ಇಪ್ಕೋ ಜನರಲ್ ಕಂಪನಿಯವರು ಈ ಭಾಗದ ಬರಗಾಲದ ಸಮಯದಲ್ಲಿ ಹವಾಮಾನ ಬೆಳೆವಿಮೆ ತುಂಬಿಸಿಕೊಂಡು 8 ವರ್ಷ ಗತಿಸಿದರೂ ಸ್ಥಳೀಯ ರೈತರಿಗೆ ಪರಿಹಾರ ಹಣ ನೀಡದೆ ಮೋಸ ಮಾಡಿದೆ ಎಂದು ತಾಲೂಕು ರೈತ ಹಿತರಕ್ಷಣೆ ಸಮಿತಿ ಅಧ್ಯಕ್ಷ ಆರ್.ಎಂ. ಕೋರಿ ಆರೋಪಿಸಿದರು.
ಭಾನುವಾರ ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಜರುಗಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. 5 ವರ್ಷದ ಹಿಂದೆ ಭೀಕರ ಬರಗಾಲ ಇದ್ದ ಸಂದರ್ಭದಲ್ಲಿ ಈ ಭಾಗದ ರೈತರಲ್ಲಿ ತಪ್ಪು ಭಾವನೆ ಮೂಡಿಸಿ ನಿಮಗೆ ಮಳೆ ಆಗದಿದ್ದರೂ ಇಪ್ಕೋ ಕಂಪನಿ ಮೂಲಕ ಪರಿಹಾರ ಹಣ ನೀಡಲಾಗುವುದೆಂದು ತಾಲೂಕಿನಿಂದ ರು. 1 ಕೋಟಿ ಹಣವನ್ನು ಈ ಭಾಗದ ರೈತರಿಂದ ಹವಾಮಾನ ಬೆಳೆ ವಿಮೆ ಭರ್ತಿ ಮಾಡಿಕೊಂಡು ಮುಂದೆ ಇಪ್ಕೋ ಕಂಪನಿ ಅಧಿಕಾರಿಗಳು ರೈತರಿಗೆ ಪರಿಹಾರ ನೀಡಲಿಲ್ಲ. ಈ ಬಗ್ಗೆ ರೈತರು ಹುಬ್ಬಳ್ಳಿಯಲ್ಲಿರುವ ಕಂಪನಿಗೆ ಸಾಕಷ್ಟು ಸಲ ಅಲೆದಾಡಿದರೂ ವಿವಿಧ ಕಾರಣ ಹೇಳಿ ಪರಿಹಾರದ ಹಣ ನೀಡಲಿಲ್ಲ. ಈ ಕಂಪನಿ ಪಕ್ಕಾ ರೈತರಿಗೆ ಟೋಪಿ ಹಾಕಿದೆ. ಈಗಲೂ ಕಂಪನಿಗೆ ಕಾಲ ಮಿಂಚಿಲ್ಲ. ಶೀಘ್ರ ಪರಿಹಾರ ಹಣ ನೀಡಬೇಕು. ಒಂದು ವೇಳೆ ಹವಾಮಾನ ಪರಿಹಾರ ನೀಡದಿದ್ದರೆ ಹುಬ್ಬಳ್ಳಿಯಲ್ಲಿರುವ ಕಂಪನಿ ಕಚೇರಿಗೆ ಬೀಗ ಜಡಿದು ಉಗ್ರ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದರು. ಈ ಸಂದರ್ಭ ಎಂ.ಎಂ. ಜಾವುರ, ಎಂ.ಟಿ. ಬದಾಮಿ, ಸಿ.ಎಚ್. ಪೂಜಾರ ಇತರರು ಹಾಜರಿದ್ದರು.