ಕಬಡ್ಡಿಗೆ ಪ್ರೋತ್ಸಾಹ ಅವಶ್ಯ
ಕನ್ನಡಪ್ರಭ ವಾರ್ತೆ, ಮುಳಗುಂದ, ಸೆ. 16
ಯುವಕರು ಸಂಘಟಿತರಾಗಿ ದೇಶಿ ಕ್ರೀಡೆ ಕಬಡ್ಡಿಯನ್ನು ಪ್ರೊತ್ಸಾಹಿಸುವುದು ಅಗತ್ಯವಾಗಿದೆ ಎಂದು ಪಪಂ ಸದಸ್ಯ ಆರ್.ಎನ್. ದೇಶಪಾಂಡೆ ಅಭಿಪ್ರಾಯಪಟ್ಟರು.
ಅವರು ಶನಿವಾರ ಸಂಜೆ ಪಟ್ಟಣದ ಎಸ್‌ಜೆಜೆಎಂ ಹೈಸ್ಕೂಲ್ ಮೈದಾನದಲ್ಲಿ ಮಹಾಂತೇಶ ಯುವಕ ಸಂಘದ ಆಶ್ರಯದಲ್ಲಿ ಆರಂಭವಾದ ರಾಜ್ಯ ಮಟ್ಟದ 55 ಕೆಜಿ ತೂಕದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಪಂ ಸದಸ್ಯ ಸಿ.ಬಿ. ಬಡ್ನಿ ಮಾತನಾಡಿ, ಅಪ್ಪಟ ದೇಶಿ ಕ್ರೀಡೆಯಾದ ಕಬಡ್ಡಿ ಕ್ರೀಡೆ ನಶಿಸುತ್ತಿರುವ ಈ ಸಂದರ್ಭದಲ್ಲಿಯೂ ಯುವಕರು ಸಂಘಟಿಕರಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಿದ್ದು ಶ್ಲಾಘನೀಯ ಎಂದರು. ಕಬಡ್ಡಿ ಪಂದ್ಯವನ್ನು ಎಪಿಎಂಸಿ ಸದಸ್ಯ ಎಸ್.ಎಂ. ನೀಲಗುಂದ ಉದ್ಘಾಟಿಸಿದರು. ಚನ್ನಪ್ಪ ಹೊರಪೇಟಿ, ಎನ್.ಎಸ್. ಮಳ್ಳಿ, ಬಸವಂತಪ್ಪ ದಿವಟರ, ಸುಧೀರ ಬಡಿಗೇರ, ರಾಮಣ್ಣ ಕಮೋಜಿ, ಎಂ.ಎಸ್. ಬಾಳಿಕಾಯಿ, ಶೇಖಪ್ಪ ಬಟ್ಟೂರ, ಪಪಂ ಸದಸ್ಯ ಎಂ.ಎಸ್. ಕಣವಿ, ಬಿ.ವಿ. ಸುಂಕಾಪುರ ಉಪಸ್ಥಿತರಿದ್ದರು.
ಗದಗ ಜಿಲ್ಲೆ ಸೇರಿದಂತೆ ವಿವಿಧೆಡೆಯ 40 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ.