ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮದ್ಯದಂಗಡಿ ಎತ್ತಂಗಡಿಗೆ ಲೋಕಾ ಮೊರೆ

Lingaraj Badiger
Updated On : 17 Sept 2013, 11:44 am

ಗದಗ: ಒಂದು ಕಾಲದಲ್ಲಿ ಲಲಿತ ಕಲೆಯ ಮೂಲಕ ನಾಡಿಗೆ ಖ್ಯಾತ ಕಲಾವಿದರು ಹಾಗೂ ಕಲಾ ಶಿಕ್ಷಕರನ್ನು ನೀಡಿದ ಕಲಾಮಂದಿರವನ್ನು ಹೊಂದಿದ ಮುಖ್ಯ ರಸ್ತೆಯಲ್ಲಿ ಇಂದು ಬಾರ್‌ಗಳೇ ಹೆಚ್ಚಿದ್ದು, ಕೂಡಲೇ ಅಲ್ಲಿರುವ ಬಾರ್‌ಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಅಲ್ಲಿನ ನಿವಾಸಿಗಳು ಮತ್ತು ಬಸವೇಶ್ವರ ಕಾಲೇಜಿನ ವಿದ್ಯಾರ್ಥಿನಿಯರು ಸೋಮವಾರ ನಗರಕ್ಕೆ ಆಗಮಿಸಿದ್ದ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರ್‌ರಾವ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿಯರು, ಇದು ನಾವು ಕಾಲೇಜಿಗೆ ತೆರಳುವ ಮುಖ್ಯ ರಸ್ತೆಯಾಗಿದೆ. ಇಲ್ಲಿ ದಿನೇ ದಿನೇ ಬಾರ್‌ಗಳು ಹುಟ್ಟಿಕೊಳ್ಳುತ್ತಿದ್ದು. ಮದ್ಯವ್ಯಸನಿಗಳು ಬೆಳಗ್ಗೆಯೇ ಅತಿಯಾದ ಮದ್ಯ ಸೇವನೆ ಮಾಡಿ, ಕಾಲೇಜಿಗೆ ಹೋಗಿ ಬರುವ ಸಂದರ್ಭದಲ್ಲಿ ಯುವತಿಯರನ್ನು ಚುಡಾಯಿಸುವುದು, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕೆಲವು ಬಾರಿ ನಡು ರಸ್ತೆಯಲ್ಲಿಯೇ ನಿಂತು ಜೋರಾಗಿ ಕೂಗಾಡುವುದನ್ನು ಮಾಡುತ್ತಿದ್ದಾರೆ. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಕಾಲೇಜು ವಿದ್ಯಾರ್ಥಿನಿಯರು ಹೆಚ್ಚಾಗಿ ಈ ರಸ್ತೆಯಲ್ಲಿ ಓಡಾಡುವುದರಿಂದ ಮದ್ಯವ್ಯಸನಿಗಳು ರಸ್ತೆಯನ್ನು ಬಿಟ್ಟು ಸರಿಯುವುದೇ ಇಲ್ಲ. ಇದರೊಟ್ಟಿಗೆ ಇದು ನಗರದ ಹೃದಯ ಭಾಗವಾಗಿದ್ದು, ಶಾಲೆ ಕಾಲೇಜುಗಳಿಗೆ ನಿತ್ಯ ಹಳ್ಳಿಗಳಿಂದ ಸಾವಿರಾರು ವಿದ್ಯಾರ್ಥಿನಿಯರು ಬಂದು ಹೋಗುತ್ತಿದ್ದು, ಅವರೆಲ್ಲರೂ ಇದೇ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಸಮೀಪದಲ್ಲಿಯೇ ಮಠವಿದೆ. ಕಾಲೇಜಿದೆ. ಇನ್ನು ತಮ್ಮ ಕೆಲಸಗಳಿಗೆಂದು ಬರುವ ಮಹಿಳೆಯರು ಸಹಿತ ಇಲ್ಲಿ ಸಂಚರಿಸುವುದು ದುಸ್ತರವಾಗಿದೆ. ಕೂಡಲೇ ಬಾರ್‌ಗಳನ್ನ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಅಲ್ಲಿ ವಾಸಿಸುವ ಮಹಿಳೆಯರೂ ಲೋಕಾಯುಕ್ತರಿಗೆ ದೂರು ಸಲ್ಲಿಸಿ, ಈ ಮದ್ಯದ ಅಂಗಡಿಗಳಿಂದಾಗಿ ಇಲ್ಲಿ ವಾಸಿಸುವುದು ಕಷ್ಟ ಸಾಧ್ಯವಾಗಿದೆ. ಅದೆಷ್ಟೋ ಬಾರಿ ಕುಡಿದ ಅಮಲಿನಲ್ಲಿ ಮನೆಯ ಬಾಗಿಲು ಬಡಿಯುತ್ತಾರೆ. ಹೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅದಕ್ಕಾಗಿ ಕೂಡಲೇ ಸ್ಥಳಾಂತರಿಸಬೇಕು ಎಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ವೈ. ಭಾಸ್ಕರಾವ್ ಜಿಲ್ಲಾಧಿಕಾರಿಗಳಿಗೆ 3 ತಿಂಗಳ ಕಾಲಾವಕಾಶ ನೀಡಿ, ಸಮಗ್ರ ತನಿಖೆ ನಡೆಸಿ ಅಂಗಡಿಗಳನ್ನು ಸ್ಥಳಾಂತರಗೊಳಿಸಲು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಈ ಪ್ರದೇಶದಲ್ಲಿ ಪ್ರತಿ ದಿನ ಬೆಳಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲು ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement