ರಸ್ತೆಗಳಲ್ಲೇ ಕಣ!
ಕನ್ನಡಪ್ರಭ ವಾರ್ತೆ, ಮುಂಡರಗಿ, ಸೆ. 16
ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಬೆಳೆಗಳನ್ನು ಒಕ್ಕುವುದಕ್ಕಾಗಿ ತಮ್ಮದೇಯಾದ ಜಮೀನು, ಇಲ್ಲವೇ ಗ್ರಾಮದ ಬಯಲು ಜಾಗೆಯಲ್ಲಿ ಕಣಗಳನ್ನು ಮಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳ ಮೇಲೆಯೇ ಕಣಗಳನ್ನು ನಿರ್ಮಿಸುತ್ತಿದ್ದು, ಇದು ರಸ್ತೆಗಳಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರನ್ನು ಗೋಳಾಡುವಂತೆ ಮಾಡಿದೆ.
ರಸ್ತೆಗಳಲ್ಲಿ ಕಣಗಳನ್ನು ಮಾಡುತ್ತಿರುವುದರಿಂದ ಸಾರ್ವಜನಿಕರು ಗೋಳು ಹೇಳತೀರದಂತಾಗಿದ್ದು, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನಹರಿಸುತ್ತಿಲ್ಲ. ತಾಲೂಕಿನ ಶಿಂಗಟಾಲೂರು, ಬಿದಿರಹಳ್ಳಿ ಭಾಗದಲ್ಲಿ ನೀರಾವರಿ ಜಮೀನುಗಳಲ್ಲಿ ಬೆಳೆಯುವ ಸೂರ್ಯಕಾಂತಿ, ಗೋವಿನಜೋಳ, ಶೇಂಗಾ ಇತರೆ ಬೆಳೆಗಳನ್ನು ತಂದು ಲೋಕೋಪಯೋಗಿ ಇಲಾಖೆಯ ಗ್ರಾಮೀಣ ಪ್ರದೇಶಗಳಿಗೆ ಹೋಗುವ ಪ್ರಮುಖ ರಸ್ತೆಯಲ್ಲಿ ಹಾಕುತ್ತಾರೆ. ಮುಂಡರಗಿಯಿಂದ ಕೊರ್ಲಹಳ್ಳಿ, ಹೂವಿನಹಡಗಲಿ, ಹಮ್ಮಿಗಿ, ಬಿದರಹಳ್ಳಿ ಗ್ರಾಮಗಳಿಗೆ ಹೊರಟರೆ ರಸ್ತೆಯಲ್ಲಿ ಸಂಪೂರ್ಣವಾಗಿ ರಾಶಿಗಳೇ ಕಾಣ ಸಿಗುತ್ತವೆ. ಇದರಿಂದಾಗಿ ರಸ್ತೆಯಲ್ಲಿ ಹೋಗಬೇಕಾದ ವಾಹನಗಳು ಕಾಲುದಾರಿಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಚಾರ ದುಸ್ತರ: ಕೊರ್ಲಹಳ್ಳಿ-ಮದಲಗಟ್ಟಿ ರಸ್ತೆ ಹಾಗೂ ಸೇತುವೆ ಬಳಿ ಹೆಚ್ಚಿನ ವಾಹನ ಸಂಚಾರ ಇರುತ್ತದೆ. ಅಲ್ಲಿಂದ ಶಿಂಗಟಾಲೂರು ಕ್ಷೇತ್ರ ಹಾಗೂ ಹಮ್ಮಿಗಿ ಗ್ರಾಮದವರೆಗೂ ಸಹ ರಸ್ತೆ ಸಾಕಷ್ಟು ವಾಹನಗಳಿಂದ ಕೂಡಿರುತ್ತದೆ. ಕೊರ್ಲಹಳ್ಳಿ ಸೇತುವೆಯ ಹತ್ತಿರ ಅರ್ಧ ರಸ್ತೆಗೆ ರಾಶಿಗಳನ್ನು ಹಾಕಿ ಉಳಿದ ರಸ್ತೆಗೆ ರಾಶಿಯನ್ನು ಜಾನುವಾರುಗಳು ತಿನ್ನಲು ಬರದಂತೆ ಕಲ್ಲುಗಳನ್ನು ಇಟ್ಟು ಮತ್ತಷ್ಟು ದಾರಿ ಸ್ಥಗಿತಗೊಳಿಸಿರುತ್ತಾರೆ. ಪ್ರತಿದಿನ ಹಮ್ಮಿಗಿ ಗ್ರಾಮಕ್ಕೆ 8 ರಿಂದ 10 ಬಾರಿ ಬಸ್ಗಳು ಓಡಾಡುತ್ತವೆ. ವಿಜಯನಗರ ಸಕ್ಕರೆ ಕಾರ್ಖಾನೆಯು ಅದೇ ಭಾಗದಲ್ಲಿ ಇರುವುದರಿಂದ ನಿತ್ಯ ಸಾಕಷ್ಟು ಕಬ್ಬಿನ ಲಾರಿಗಳು ಹಾಗೂ ಮೋಟಾರ್ಬೈಕ್ಗಳು, ಟಂಟಂ ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೇ ಓಡಾಡುತ್ತವೆ.
ಈ ಭಾಗದಲ್ಲಿ ಶಿಂಗಟಾಲೂರು ವೀರಭದ್ರೇಶ್ವರ ಕ್ಷೇತ್ರವಿರುವುದರಿಂದ ಪ್ರತಿ ತಿಂಗಳು ಅಮಾವಾಸ್ಯೆಯ ದಿನದಂದು ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸ್ವಂತ ವಾಹನಗಳನ್ನು ತೆಗೆದುಕೊಂಡು ಹಾಗೂ ಅಂದು ಕೆಎಸ್ಆರ್ಟಿಸಿಯಿಂದಲೂ ಹೆಚ್ಚಿನ ಬಸ್ಗಳನ್ನು ಬಿಡುವುದರಿಂದ ಆ ರಸ್ತೆಯಲ್ಲಿ ಸಂಚರಿಸುವವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಅಪಘಾತ ಸಂಭವಿಸುವ ಸಾಧ್ಯತೆ: ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಿ ಕಣಗಳನ್ನು ಮಾಡಿಕೊಂಡರೆ ಕೃಷಿ ಇಲಾಖೆ ಸುವ್ಯವಸ್ಥೆಯ ಕಣಗಳನ್ನು ನಿರ್ಮಿಸಿಕೊಳ್ಳಲು ಸಹಾಯಧನ ನೀಡುತ್ತದೆ. ಅದರ ಸೌಲಭ್ಯ ಪಡೆದು ಗಟ್ಟಿಮುಟ್ಟಾದ ಕಣಗಳನ್ನು ಸಿದ್ಧಪಡಿಸಿಕೊಳ್ಳಬಹುದು. ರಸ್ತೆಯಲ್ಲಿ ಮಸೀನ್ ಮೂಲಕ ರಾಶಿಮಾಡಿ ಅದರಿಂದ ಬರುವ ಹೊಟ್ಟನ್ನು ಅಲ್ಲಿಯೇ ಬಿಡುವುದರಿಂದ ಯಾವುದೇ ಲಾಭವಿಲ್ಲ. ಅದೇ ಜಮೀನಿನಲ್ಲಿ ರಾಶಿಮಾಡಿದರೆ ರಾಶಿಯಿಂದ ಬರುವ ಸಾವಯವ ಪದಾರ್ಥಗಳು ತಮ್ಮ ಜಮೀನಿನಲ್ಲಿಯೇ ಬಿದ್ದು, ಅಲ್ಲಿಯೇ ಕೊಳೆತು ಉತ್ತಮ ಗೊಬ್ಬರವಾಗುತ್ತದೆ. ರಸ್ತೆಗಳಲ್ಲಿ ಕಣಗಳನ್ನು ಮಾಡುವುದರಿಂದ ವಾಹನಗಳ ಟೈರ್ಗಳಲ್ಲಿನ ಕಲ್ಮಷ ಹಾಗೂ ರಸ್ತೆಯಲ್ಲಿರುವ ಅನೇಕ ಗಲೀಜು ಆಹಾರಧಾನ್ಯಗಳಲ್ಲಿ ಸೇರುತ್ತದೆ. ಅಲ್ಲದೇ ರಸ್ತೆಯಲ್ಲಿ ಮೈಮರೆತು ಕೆಲಸ ಮಾಡುವಾಗ ಕೆಲವು ಬಾರಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
-ಶರಣು ಸೊಲಗಿ