ಲೋಕಾಯುಕ್ತರಿಂದ ಅರ್ಜಿ ವಿಚಾರಣೆ
ಕನ್ನಡಪ್ರಭ ವಾರ್ತೆ, ಗದಗ, ಸೆ. 16
ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಸೋಮವಾರ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರರಾವ್ ಅವರು, ಜಿಲ್ಲೆಯ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಹಾಗೂ ಅರ್ಜಿಗಳ ವಿಚಾರಣೆ ನಡೆಸಿದರು.
2003ರಲ್ಲಿ ತಾಮ್ರಗುಂಡಿ ಕೆರೆ ಒಡೆದು ಹೊಲಗಳಿಗೆ ಕೆರೆಯ ನೀರು ನುಗ್ಗಿ ರೈತರ ಜಮೀನಿನಲ್ಲಿದ್ದ ಬೆಳೆಗಳು ಹಾನಿಗೊಳಗಾಗಿದ್ದು, ಪರಿಹಾರ ನೀಡಲು ಸಂಬಂಧಿಸಿದ ಇಲಾಖೆ ಮೀನಮೇಷ ಎಣಿಸುತ್ತಿದೆ. ಈ ಕುರಿತು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ರೈತರು ನ್ಯಾಯಮೂರ್ತಿಗಳ ಎದುರು ತಮ್ಮ ಅಳಲು ತೋಡಿಕೊಂಡರು. ಈ ಕುರಿತು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಡಾ. ಭಾಸ್ಕರರಾವ್ ನೀರಾವರಿ ಇಲಾಖೆಯ ಅಧಿಕಾರಿಗಳ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲಾಗಿದೆ. ಇದೀಗ ರೈತರು ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಹೆಚ್ಚಿನ ಪರಿಹಾರ ನೀಡಲು ಇಲಾಖೆಯಲ್ಲಿ ಅವಕಾಶವಿಲ್ಲ ಎಂದರು. ವಿಚಾರಣೆ ನಡೆಸಿದ ಬಳಿಕ ನ್ಯಾಯಮೂರ್ತಿಗಳು ಹಾನಿಗೊಳಗಾದ ರೈತರಿಗೆ ಇಲಾಖೆಯೂ ಸೂಕ್ತ ಪರಿಹಾರ ನೀಡಿದೆ. ಹೆಚ್ಚಿನ ಪರಿಹಾರ ಬೇಕಾದಲ್ಲಿ ತಾವುಗಳು ನ್ಯಾಯಾಲಯದ ಮೊರೆ ಹೋಗುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 2009 ಸೆಪ್ಟೆಂಬರ್‌ನಲ್ಲಿ ಉಂಟಾದ ಭೀಕರ ಪ್ರವಾಹದಿಂದ ಕುರ್ಲಗೇರಿ ಗ್ರಾಮದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಸುಮಾರು 50 ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಮನೆ ಒದಗಿಸಬೇಕು ಎಂದು ಕುರ್ಲಗೇರಿ ಗ್ರಾಮದ ನಿವಾಸಿ ಎಂ. ಕಲಹಾಳ ಎಂಬುವರು ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಹಾನಿಗೊಳಗಾಗಿರುವ ಫಲಾನುಭವಿಗಳಿಗೆ 4 ತಿಂಗಳೊಳಗಾಗಿ ಆಶ್ರಯ ಮನೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
1999ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ನೀಡುವುದಾಗಿ 441 ಅರ್ಜಿದಾರರಿಂದ ಸುಮಾರು ರು. 25 ಲಕ್ಷ ಹಣ ಪಡೆಯಲಾಗಿದೆ. ಆದರೆ ಇದುವರೆಗೂ ಫಲಾನುಭವಿಗಳಿಗೆ ನಿವೇಶನ ಒದಗಿಸಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ದೂರು ಸಲ್ಲಿಸಲಾಯಿತು. ಈ ಕುರಿತು ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ನಗರದಲ್ಲಿ ಸರ್ಕಾರದ ಭೂಮಿ ಇಲ್ಲದ ಕಾರಣ ನಗರದ ಹೊರಗಡೆ ಭೂಮಿ ಖರೀದಿ ಮಾಡಲಾಗುವುದು. ಅಲ್ಲದೇ ಫಲಾನುಭವಿಗಳು ಭೂಮಿ ಖರೀದಿಯ ಹಣ ಪಾವತಿಸಿದಲ್ಲಿ ಶೀಘ್ರದಲ್ಲಿಯೇ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು. ನಂತರ ನ್ಯಾಯಮೂರ್ತಿಗಳು ಮಾತನಾಡಿ, 2 ವರ್ಷದಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಬೇಕು. ಫಲಾನುಭವಿಗಳಿಗೆ ನಿವೇಶನ ಒದಗಿಸಬೇಕು ಎಂದರು.
ಹೀಗೆ ಬೆಳಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಹಾಗೂ ಅರ್ಜಿಗಳ ವಿಚಾರಣೆಯನ್ನು ಲೋಕಾಯುಕ್ತ ನ್ಯಾ. ಡಾ.ವೈ. ಭಾಸ್ಕರರಾವ್ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ, ಜಿಪಂ ಸಿಇಒ ವೀರಣ್ಣ ತುರುಮರಿ ಸೇರಿದಂತೆ ಜಿಲ್ಲಾಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.