ನೀರಿನ ಘಟಕ ಸ್ಥಾಪನೆ: ವಾಗ್ವಾದ
ನರಗುಂದ: ತಾಲೂಕಿನ ಜಗಾಪುರ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಗೆ ಗ್ರಾಮದ ಮಾರುತಿ ವಿವಿಧೋದ್ದೇಶ ಯುವಕ ಮಂಡಳದ ಕಟ್ಟಡದಲ್ಲಿ ಸ್ಥಾಪನೆ ಮಾಡುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಜರುಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಯುವಕ ಮಂಡಳ ಸದಸ್ಯರು ಈ ಕಟ್ಟಡವನ್ನು ನಾವು ಶುದ್ಧ ನೀರಿನ ಘಟಕಕ್ಕೆ ಕೊಡುವುದಿಲ್ಲ, ಇದು ಯುವಕ ಮಂಡಳದ ಕಟ್ಟಡ ಎಂದಾಗ ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು, ಒಂದು ಸಂದರ್ಭದಲ್ಲಿ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಯುವಕ ಮಂಡಳದ ಯುವಕರು ಶುದ್ಧ ನೀರಿನ ಘಟಕಕ್ಕೆ ನಮ್ಮ ವಿರೋಧವಿಲ್ಲ, ಅದಕ್ಕೆ ಬೇಕಾದ ವಂತಿಗೆ ಕೂಡಿಸಿ ಕೊಡುವುದಕ್ಕೂ ನಾವು ಸಿದ್ಧರಿದ್ದೇವೆ. ಆದರೆ, ಈ ಘಟಕವನ್ನು ಕೆರೆ ಪಕ್ಕದಲ್ಲಿ ಮಾಡಬೇಕು. ನಾವು ನಮ್ಮ ಯುವಕ ಮಂಡಳದ ಕಟ್ಟಡವನ್ನು ಇದಕ್ಕಾಗಿ ಬಿಟ್ಟು ಕೊಡವುದಿಲ್ಲ ಎಂದು ಯುವಕ ಮಂಡಳದ ಮುಂದೆ ಪ್ರತಿಭಟಿನೆಗೆ ಮುಂದಾದರು.
ತಾಪಂ ಸದಸ್ಯ ಮಲ್ಲಪ್ಪ ಮೇಟಿ ಮಾತನಾಡಿ, ನಾವು ಯುವಕರಿದ್ದಾಗಲೇ ಕಟ್ಟಡವನ್ನು ಮಾಡಿದ್ದೇವೆ. ಹಲವಾರು ವರ್ಷಗಳಿಂದ ಈ ಯುವಕರ ಮಂಡಳದಿಂದ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಇದನ್ನು ಸಹಿಸದ ಕಾಂಗ್ರೆಸ್ ಪಕ್ಷದ ಕೆಲವರು ಈ ಕಟ್ಟಡವನ್ನೇ ಕಸಿದುಕೊಂಡು ಯುವಕ ಮಂಡಳದ ಸಂಘಟನೆಯನ್ನು ಒಡೆಯುವ ಹುನ್ನಾರ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆರೋಪಿಸಿದರು.
ಗ್ರಾಪಂ ಅಧ್ಯಕ್ಷ ಗೋವಿಂದರಡ್ಡಿ ಸಿದ್ನಾಳ ಮಾತನಾಡಿ, ಗ್ರಾಮಕ್ಕೆ ಅವಶ್ಯವಾಗಿ ಶುದ್ಧ ನೀರಿನ ಘಟಕ ಬೇಕು, ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಾವು ಈ ಹಿಂದೆ ಕೆರೆಯ ಪಕ್ಕದಲ್ಲಿ ತೋರಿಸಿದ ಸ್ಥಳದಲ್ಲಿ ಮಾಡುವುದು ಸೂಕ್ತ. ಆದರೆ, ಗ್ರಾಮದ ಕೆಲವರು ಇದೇ ಯುವಕ ಮಂಡಳದ ಕಟ್ಟಡವನ್ನು ಕೇಳುತ್ತಿರುವುದು ತಿಳಿಯದಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸಪ್ಪ ಹುಣಸಿಕಟ್ಟಿ, ಮಾದೇಗೌಡ ತಿಗಡಿ, ಅಶೋಕ, ಅಲ್ಲಿಸಾಬ ಅಗಸರ, ಬಸವಂತಪ್ಪ, ವೆಂಕರಡ್ಡಿ ಹಳೇಮನಿ ಮುಂತಾದವರು ಹಾಜರಿದ್ದರು.