ಪುಟ್ಟರಾಜರ ಪಡೆದ ಜಿಲ್ಲೆ ಜನರು ಧನ್ಯ: ಸಚಿವ ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ಸೆ. 18
ನಡೆದಾಡುವ ದೇವರೆಂದೇ ಪ್ರಖ್ಯಾತಿ ಪಡೆದಿದ್ದ ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳನ್ನು ಪಡೆದಿರುವ ಗದಗ ಜಿಲ್ಲೆಯ ಜನರೇ ಧನ್ಯರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಹಾಗೂ ದಿ. ಗಂಗಮ್ಮ ಸುಂಕಪ್ಪ ಮುಳಗುಂದ ಇವರ
ತೃತೀಯ ಪುಣ್ಯಸ್ಮರಣೆ ಅಂಗವಾಗಿ ದಲಿತ ಯುವ ಸೇನಾ ಸಮಿತಿ ವತಿಯಿಂದ ಹಮ್ಮಿಕೊಂಡ ಬುದ್ಧಿ ಮಾಂದ್ಯ ಮಕ್ಕಳಿಗೆ ಬಟ್ಟೆ ವಿತರಣೆಯ ಕಾರ್ಯಕ್ರಮದಲ್ಲಿ ಬಟ್ಟೆ ವಿತರಿಸಿ ಮಾತನಾಡಿದರು.
ದೇಶದಲ್ಲಿಯೇ ಸಂಗೀತದಲ್ಲಿ ಹೆಸರು ಮಾಡಿರುವ ಅಂಧ ಮಕ್ಕಳಿಗೆ ಆಶ್ರಯದಾತವಾಗಿದ್ದರು. ಎಲ್ಲ ದೇವರಿಗಿಂತ ತಾಯಿ ದೇವರೇ ದೊಡ್ಡದು, ಎಲ್ಲ ದೇವರನ್ನು ಪೂಜಿಸುವುದಕ್ಕಿಂತ ತಾಯಿಯನ್ನು ಪೂಜಿಸುವುದು ದೊಡ್ಡದು, ಅಲ್ಲದೇ ಬುದ್ಧಿಮಾಂದ್ಯ ಮಕ್ಕಳೆನ್ನುವ ಶಬ್ದವನ್ನು ಮಕ್ಕಳ ಮೇಲೆ ಪ್ರಭಾವ ಬೀರದಂತೆ ವಿಶೇಷ ಮಕ್ಕಳೆಂದು ಕರೆಯಬೇಕು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಮೋಹನ ನಾಗಮ್ಮನವರ ಮಾತನಾಡಿ, 21ನೇ ಶತಮಾನದಲ್ಲಿ ಕೆಲವೊಬ್ಬ ಮಠಾಧೀಶರು ತಮ್ಮ ಹಿತಕ್ಕಾಗಿ ಐಷಾರಾಮಿ ಜೀವನ ನಡೆಸುತ್ತಿದ್ದು, ಇಂತಹ ಮಕ್ಕಳ ಕಡೆಗೆ ಮಠಾಧೀಶರು ಕಾಳಜಿ ವಹಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ವಿಜಯಕುಮಾರ ಗಡ್ಡಿ, ಅಶೋಕ ಕಾಳೆ ಹಾಗೂ ಪ್ರೊ. ಬಿ.ಬಿ.ಗೌಡರ ಮಾತನಾಡಿದರು. ಈ ಸಂದರ್ಭದಲ್ಲಿ ಡಿ.ಎಸ್.ಪಿ. ನ್ಯಾಮಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಉದ್ಘಾಟಿಸಿದರು.
ಅಂಜುಮನ್ ಕಮಿಟಿ ಅಧ್ಯಕ್ಷ ಸಾಧಿಕ ನರಗುಂದ, ಮಂಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರಸಿಂಗ ರಜಪೂತ, ಹನಮಂತ ವೀರಾಪುರ, ನಗರಸಭೆ ಸದಸ್ಯ ಸುರೇಶ ಕಟ್ಟಿಮನಿ, ಭೋವಿ ಸಮಾಜದ ಅಧ್ಯಕ್ಷ ಐ.ಎಫ್. ಬೆಟಗೇರಿ, ಮಾಯಪ್ಪ ಪೂಜಾರ, ಸಣ್ಣವೆಂಕಟೇಶ ಬಿಂಕದಕಟ್ಟಿ, ರಮೇಶ ಮುಳಗುಂದ, ವೆಂಕಟೇಶ ಬಳ್ಳಾರಿ, ಪ್ರಕಾಶ ಕೆಲೂರ, ಇಮಾಮಸಾಬ ಕಲೆಗಾರ, ಇಸ್ಮಾಯಿಲ್ ಮುಲ್ಲಾ, ಗುರು ಮುಳಗುಂದ, ರವಿಕಾಂತ ಅಂಗಡಿ, ಮಾದೇಶ, ವೀರೇಶ ಚಲವಾದಿ, ಚಂದ್ರು ಹರಿಜನ ಮುಂತಾದವರು ಉಪಸ್ಥಿತರಿದ್ದರು. ದಲಿತ ಯುವಸೇನಾ ಸಮಿತಿಯ ಅಧ್ಯಕ್ಷ ವಿಜಯ ಮುಳಗುಂದ ಸ್ವಾಗತಿಸಿದರು. ವೈ.ಕೆ. ಚೌಡಾಪುರ ನಿರೂಪಿಸಿದರು. ರವಿಕಾಂತ ಅಂಗಡಿ ವಂದಿಸಿದರು.