ಪುರಸಭೆಗೆ ದಿಢೀರ್ ಭೇಟಿ ನೀಡಿದ ಡಿಸಿ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಗೆ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ದಿಢೀರ್‌ನೆ ಭೇಟಿ ನೀಡಿ, ಪಟ್ಟಣದ ಸಮಸ್ಯೆಗಳ ಕುರಿತು ಮುಖ್ಯಾಧಿಕಾರಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, ಪಟ್ಟಣದ ರಸ್ತೆಗಳು ತುಂಬಾ ಹದೆಗೆಟ್ಟಿವೆ. ಅವುಗಳ ದುರಸ್ತಿ ಕಾರ್ಯವನ್ನು ಶೀಘ್ರವಾಗಿ ಮಾಡಬೇಕು. ಒಳಚರಂಡಿ ಯೋಜನೆಗೆ ತುಂಬಬೇಕಾದ ಹಣ, ಯೋಜನೆಯ ರೂಪು ರೇಷಗಳ ಸಿದ್ಧತೆ ಹಾಗೂ ಯೋಜನೆಯ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕುರಿತು ನಡೆಸಿದ ತಯಾರಿಯ ಮಾಹಿತಿ ಪಡೆದುಕೊಂಡರು. ನಗರೋತ್ಥಾನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಹಾಗೂ ಎಸ್‌ಎಫ್‌ಸಿ ಯೋಜನೆಯಲ್ಲಿ ಮಂಜೂರಾದ ಹಣವನ್ನು ಯಾವ ಯಾವ ಕಾಮಗಾರಿಗೆ ಬಳಕೆ ಮಾಡಿಕೊಂಡಿದೆ. ಪಟ್ಟಣದ ಕುಡಿವ ನೀರಿನ ಯೋಜನೆಯ ಆದಾಯ ಮತ್ತು ಖರ್ಚುಗಳ ಬಗ್ಗೆ, ಪಟ್ಟಣದ ಕಸ ವಿಲೇವಾರಿ ಮಾಡುವ ಹಾಗೂ ಕಸದಿಂದ ತೆಗೆದ ಗೊಬ್ಬರ ಇವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು. ಪುರಸಭೆಯ ಸಿಬ್ಬಂದಿಗಳ ಕೊರತೆ, ಹೊಸ ಟ್ರ್ಯಾಕ್ಟರ್ ಬೇಡಿಕೆಯ ಕುರಿತು ಪರಿಶೀಲನೆ ಮಾಡುವುದಾಗಿ ತಿಳಿಸಿದರು.
ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ, ಸದಸ್ಯರಾದ ರಾಜು ಕುಂಬಿ, ಅನಿಲ ಮುಳಗುಂದ, ದಾದಾಪೀರ್ ಮುಚ್ಚಾಲೆ, ಬಸವರಾಜ ಓದಾನವರ ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.