ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Mainashree
Updated On : 19 Sept 2013, 10:56 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 18
ಪೊಲೀಸ್ ದೌರ್ಜನ್ಯ ಖಂಡಿಸಿ ಟ್ರ್ಯಾಕ್ಟರ್ ಚಾಲಕರು, ಮಾಲೀಕರು ಸ್ಥಳೀಯ ಹಿರೇ ದುರ್ಗಾದೇವಿ ದೇಗುಲ ಆವರಣದಲ್ಲಿ ಬುಧವಾರ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಎನ್.ವೀರಾರೆಡ್ಡಿ ಟ್ರ್ಯಾಕ್ಟರ್ ಚಾಲಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೇ ಸಾವಿರ, ಎರಡು ಸಾವಿರ ರುಪಾಯಿ ಕೊಡಬೇಕು ಒಂದು ವೇಳೆ ಕೊಡಲು ನಿರಾಕರಿಸಿದರೆ ಮನಬಂದಂತೆ ಬಡಿಯಲು ಮುಂದಾಗುತ್ತಿದ್ದಾರೆ ಎಂದು ದೂರಿದರು.
ಈ ಭಾಗದಲ್ಲಿ ಸತತ ಬರಗಾಲ ಆವರಿಸಿರುವುದರಿಂದ ಬ್ಯಾಂಕಿನಲ್ಲಿ ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿಸಿ ಇದನ್ನೆ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಬ್ಯಾಂಕಿನ ಕಂತು ಕಟ್ಟುವುದು ದುಸ್ತರವಾಗಿದೆ. ರೈತರ ಜಮೀನಿನಲ್ಲಿ ಅಲ್ಪ ಸ್ವಲ್ಪ ಮಣ್ಣು, ಉಸುಕನ್ನು ಬಾಡಿಗೆ ರೂಪದಲ್ಲಿ ಸಾಗಿಸಿ ಬದುಕುತ್ತಿದ್ದು, ಇಂಥ ಸಂದರ್ಭದಲ್ಲಿ ಪೊಲೀಸರ ಕಿರುಕುಳ ಮಿತಿಮೀರಿದೆ ಎಂದು ದೂರಿದರು.
ಪಟ್ಟಣದಲ್ಲಿ ಮಟ್ಕಾ, ಇಸ್ಪೀಟ್‌ನಂತಹ ಕಾನೂನು ಬಾಹಿರ ಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಇದ್ಯಾವುದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವ ಸ್ಥಳೀಯ ಪೊಲೀಸರ ನಡವಳಿಕೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಜತೆಗೆ ಇಂಥ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪೊಲೀಸರ ಸಹಕಾರವೂ ಇದೆ ಎಂದು ಆರೋಪಿಸಿದರು. ಪೊಲೀಸರು ಕೂಡಲೇ ಈ ಕ್ರಮವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಪೊಲೀಸರ ಕಿರುಕುಳವನ್ನು ಖಂಡಿಸಿ ಸೆ. 25ರಂದು ಪಟ್ಟಣದ ಕಾಲಕಾಲೇಶ್ವರ ವೃತ್ತದಿಂದ ಪೊಲೀಸ್ ಠಾಣೆ ವರೆಗೆ ನೂರಾರು ಟ್ರ್ಯಾಕ್ಟರ್‌ಗಳ ಮೂಲಕ ಬೃಹತ್ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದರು.
ಮಾಜಿ ಸಚಿವ ಬಂಡಿ ಬೆಂಬಲ: ಈ ವೇಳೆ ಹಿರೇ ದುರ್ಗಾದೇವಿ ದೇಗುಲ ಆವರಣದಲ್ಲಿ ಟ್ರ್ಯಾಕ್ಟರ್ ಚಾಲಕ, ಮಾಲೀಕರು ನಡೆಸುತ್ತಿರುವ ಪ್ರತಿಭಟನೆಗೆ ಮಾಜಿ ಸಚಿವ ಕಳಕಪ್ಪ ಬಂಡಿ ಬೆಂಬಲ ವ್ಯಕ್ತಪಡಿಸಿ ಕಾನೂನು ಸುವ್ಯವಸ್ಥೆ ರಕ್ಷಿಸಬೇಕಾದ ಪೊಲೀಸರೇ ದೌರ್ಜನ್ಯಕ್ಕಿಳಿದರೆ ಸಾರ್ವಜನಿಕರ ಪಾಡೇನು ಎಂದು ಪ್ರಶ್ನಿಸಿದ ಅವರು ಸ್ಥಳೀಯ ಪಿಎಸ್‌ಐ ವೀರಾರೆಡ್ಡಿಯವರ ಕಾರ್ಯ ನಿರ್ವಹಣೆ ಬಗೆಗೆ ಇತ್ತೀಚೆಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಕೇಳಿ ಬರುತ್ತಿದ್ದು, ಅವರು ಕೂಡಲೇ ಇಂಥ ಚಟುವಟಿಕೆಯನ್ನು ತೊರೆದು ನ್ಯಾಯ ಸಮ್ಮತವಾಗಿ ತಮ್ಮ ಕರ್ತವ್ಯ ಪಾಲನೆ ಮಾಡಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಪಟ್ಟಣದ ಜನತೆ ಪಕ್ಷಾತೀತವಾಗಿ ಉಗ್ರ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಿ.ಎಂ. ಸಜ್ಜನ, ಪ್ರಭು ಚವಡಿ, ಎಚ್.ಎಸ್. ಸೋಂಪುರ, ಅಂಬರೇಶ ಅರಳಿ, ಅಂಬರೇಶ ಬಳಿಗೇರ, ಯಲ್ಲಪ್ಪ ಬಂಕದ, ಮೂಕಪ್ಪ ನಿಡಗುಂದಿ, ನಾಗಯ್ಯ ಅಂಗಡಿ, ಷಣ್ಮುಖಪ್ಪ ನಿಡಗುಂದಿ, ಶರಣಪ್ಪ ಚಳಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement