ಸುದ್ದಿ ಸಂಕ್ಷೇಪ
ವಿದ್ಯುತ್ ನಿಲುಗಡೆ
ಗದಗ: 110 ಕೆವಿ ಸಂಭಾಪುರ ಉಪವಿದ್ಯುತ್ ವಿತರಣಾ ಕೇಂದ್ರದಲ್ಲಿ, 110 ಕೆವಿ ಗಜೇಂದ್ರಗಡ ಹಾಗೂ 33 ಕೆವಿ ಮುಶಿಗೇರಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ವಿದ್ಯುತ್ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸೆ. 19 ರಂದು 110 ಕೆವಿ ಸಂಭಾಪುರ ಉಪವಿದ್ಯುತ್ ಕೇಂದ್ರದಿಂದ ಪೂರೈಕೆಯಾಗುತ್ತಿರುವ 11 ಕೆವಿ ವಿತರಣಾ ಮಾರ್ಗಗಳಲ್ಲಿ ಮತ್ತು ಸೆ. 20 ರಂದು 110 ಕೆವಿ ಗಜೇಂದ್ರಗಡ ಹಾಗೂ 33 ಕೆವಿ ಮುಶಿಗೇರಿ ವಿದ್ಯುತ್ ಕೇಂದ್ರದಿಂದ ಪೂರೈಕೆಯಾಗುತ್ತಿರುವ 11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಕಾರಣ ಸಾರ್ವಜನಿಕರು ಪ್ರಕಟಣೆ ಗಮನಿಸಿ ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬ್ಯಾಂಕ್ ಶಾಖೆ ಉದ್ಘಾಟನೆ
ಗದಗ: ಇಂಡಿಯನ್ ಬ್ಯಾಂಕ್ ಗದಗ ಶಾಖೆಯ ಉದ್ಘಾಟನೆಯನ್ನು ಸೆ. 19ರ ಬೆಳಗ್ಗೆ 10.30 ಗಂಟೆಗೆ ಸ್ಥಳೀಯ ಕಳಸಾಪುರ ರಸ್ತೆಯಲ್ಲಿರುವ ಸೇವಾಲಾಲ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಡಿಜಿಎಂ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಪಿ.ಜಿ. ರಿಸರ್ಚ್ ಸೆಂಟರನ ಮುಖ್ಯೋಪಾಧ್ಯಾಯ ಡಾ. ಜೆ.ಬಿ. ಪಾಟೀಲ ನೆರವೇರಿಸುವರು. ಅತಿಥಿಗಳಾಗಿ ನಗರಸಭೆ ಸದಸ್ಯ ಅನಿಲ ಗರಗ, ವಲಯ ಮುಖ್ಯಸ್ಥ ಜಿ.ಎಂ. ಶೆಟ್ಟಿರವರು ಉಪಸ್ಥಿತರಿರುವರು ಎಂದು ಗದಗನ ಶಾಖಾ ಪ್ರಬಂಧಕ ಮೋಹನ ಗುರವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಣ ಪುರಸಭೆ ಕಾಂಗ್ರೆಸ್ ತೆಕ್ಕೆಗೆ
ರೋಣ: ಪುರಸಭೆಯ ಅಧ್ಯಕ್ಷರಾಗಿ ಮತ್ತಣ್ಣ ಸಂಗಳದ, ಉಪಾಧ್ಯಕ್ಷರಾಗಿ ಲಕ್ಷ್ಮಿ ಗಡಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಪುರಸಭೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. 23 ಸದಸ್ಯ ಬಲದ ರೋಣ ಪುರಸಭೆಯಲ್ಲಿ 16 ಜನ ಕಾಂಗ್ರೆಸ್ ಸದಸ್ಯರು ಆಯ್ಕೆಗೊಳ್ಳುವ ಮೂಲಕ ಸ್ಪಷ್ಟ ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷೇತರವಾಗಿ ಆಯ್ಕೆಗೊಂಡ ಮಂಜುನಾಥ ಹಾಳಕೇರಿ ಹಾಗೂ ಬಿಎಸ್ಆರ್ನಿಂದ ಆಯ್ಕೆಗೊಂಡ ಜಯಶ್ರೀ ನವಲಗುಂದ ಕಾಂಗ್ರೆಸ್ ತಕ್ಕೆಯಲ್ಲಿ ಗುರುತಿಸಿಕೊಂಡಿದ್ದರಿಂದ, ಕೇವಲ 5 ಸ್ಥಾನಗಳಲ್ಲಿ ಗೆದ್ದ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಸುಮ್ಮನೆ ಕಾದು ನೋಡುವ ತಂತ್ರ ಅನುಸರಿಸುತ್ತಿತ್ತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎ.ಜೆ. ಪಂಡಿತ, ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ಎಸ್. ಪಾಟೀಲ, ವಿ.ಆರ್. ಗುಡಿಸಾಗರ, ಬಸವರಾಜ ನವಲಗುಂದ, ಕೆಂಚಪ್ಪ ಗಡಗಿ, ಆನಂದ ಚಂಗಳಿ ಉಪಸ್ಥಿತರಿದ್ದರು.
ಇಂದು ಶಿವನಾಮ ಸಪ್ತಾಹ
ನರಗುಂದ: ತಾಲೂಕಿನ ಸುರಕೋಡ ಗ್ರಾಮದಲ್ಲಿ ಸೆ. 19ರ ರಾತ್ರಿ 8ಕ್ಕೆ ಶರಣ ಹರಳಯ್ಯ ಸಮಾಜ ಬಾಂಧವರಿಂದ ಹಾಗೂ ಗ್ರಾಮಸ್ಥರಿಂದ 7 ದಿನಗಳ ಶಿವನಾಮ ಸಪ್ತಾಹ ಹಾಗೂ ಗದಗಿನ ಜ. ಶಿವಾನಂದ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಮಾರಂಭಕ್ಕೆ ಗದಗನ ಶಿವಾನಂದ ಬೃಹನ್ಮಠದ ಜ. ಶಿವಾನಂದ ಶ್ರೀಗಳು, ಹರಳಕಟ್ಟಿ ಶಿವಾನಂದ ಬ್ರಹ್ಮ ವಿದ್ಯಾಶ್ರಮದ ನಿಜಗುಣ ಶ್ರೀಗಳು, ಕರಿಕಟ್ಟಿ ಶಿವಾನಂದಮಠದ ಡಾ. ಬಸವರಾಜ ಶ್ರೀಗಳು, ಸಂಗಳದ ರಾಚೋಟೇಶ್ವರ ಶ್ರೀಗಳು, ಶಿಶುವಿನಹಳ್ಳಿ ಮಲ್ಲಯ್ಯ ಶ್ರೀಗಳು, ಕುರಬಗಟ್ಟಿ ಬಸವಾನಂದ ಶ್ರೀಗಳು, ಗದಗದ ನಿಜಾನಂದ ಶ್ರೀಗಳು, ಶಾಸಕ ಬಿ.ಆರ್. ಯಾವಗಲ್, ಮಾಜಿ ಸಚಿವ ಸಿ.ಸಿ. ಪಾಟೀಲ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಸದಸ್ಯೆ ಶಾಂತಾ ದಂಡಿನ, ಬಿ.ಎಸ್. ಉಪ್ಪಾರ, ಪುರಸಭೆ ಸದಸ್ಯ ವಾಸು ಜೋಗಣ್ಣವರ, ಬಿ.ಪಿ. ಚಿಕ್ಕಮಠ, ಆರ್.ವಿ. ಚಿಕ್ಕಮಠ ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.