ಪರಿಹಾರ ಧನ: ರೈತರಿಗೆ ತಾರತಮ್ಯ?
ಕನ್ನಡಪ್ರಭ ವಾರ್ತೆ, ನರಗುಂದ, ಸೆ. 19
ಕಳೆದ 2-3 ವರ್ಷಗಳಿಂದ ತಾಲೂಕಿನಲ್ಲಿ ಸತತ ಬರಗಾಲದ ಛಾಯೆ ಆವರಿಸಿ ರೈತರನ್ನು ಸಂಕಷ್ಟಕ್ಕೀಡು ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಈಚೆಗೆ ನರಗುಂದ ತಾಲೂಕಾದ್ಯಂತ ಎಡೆಬಿಡದೇ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳೆಲ್ಲ ನೀರಿನಲ್ಲಿ ನಿಂತು ಸಂಪೂರ್ಣ ಹಾಳಾಗಿವೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಕೇವಲ ಬೆಣ್ಣೆ ಹಳ್ಳ ಅಕ್ಕ-ಪಕ್ಕದಲ್ಲಿರುವ ಜಮೀನುಗಳ ರೈತರಿಗೆ ಮಾತ್ರ ಪರಿಹಾರ ನೀಡಿ ಕೈತೊಳೆದುಕೊಂಡಿದ್ದು, ಇನ್ನುಳಿದ ರೈತರ ಬೆಳೆಗಳಿಗೆ ಪರಿಹಾರ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಬರಗಾಲದ ಛಾಯೆ: ಸತತ 3 ವರ್ಷಗಳಿಂದ ನರಗುಂದ ತಾಲೂಕು ಬರದ ಛಾಯೆಯಲ್ಲಿಯೇ ಜೀವನ ಕಳೆದಿದೆ. ಬಿತ್ತನೆ ಮಾಡಿದ ಸಂದರ್ಭ ಅಗತ್ಯಕ್ಕೆ ತಕ್ಕಂತೆ ಮಳೆಯಾಗದಿರುವುದರಿಂದ ರೈತರು ಬೆಳೆದ ಬೆಳೆಗಳೆಲ್ಲ ಸಂಪೂರ್ಣ ಒಣಗಿ ರೈತರನ್ನು ಸಂಕಷ್ಟಕ್ಕೀಡು ಮಾಡಿತ್ತು. ಆದರೆ, ಈ ಬಾರಿ ವರುಣದೇವ ಭೂತಾಯಿಯ ಮೇಲೆ ಅದೆಕೋ ಹೆಚ್ಚಿನ ಪ್ರೀತಿ ತೋರುತ್ತಿದ್ದಾನೆ ಎನ್ನುವಂತಿದ್ದು, ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಬಿತ್ತನೆ ಮಾಡಿದ ಬೆಳೆಗಳೆಲ್ಲ ಮೊಳಕೆಯೊಡೆದು ಎಲೆ ಬಿಡುವ ಮೊದಲೆ ಬೇರುಗಳು ಕೊಳೆತು ಸಂಪೂರ್ಣ ಹಾಳಾಗುವ ಪರಿಸ್ಥಿತಿ ತಲೆದೂರಿದೆ.
ಮಳೆ ಅತಿಯಾದರೆ ಸಂಕಷ್ಟ: ಮುಂಗಾರು ಪ್ರಾರಂಭದಲ್ಲಿ ತಾಲೂಕಿನಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ರೈತರು ಇಲ್ಲಿನ ಮಲಪ್ರಭಾ ಜಲಾಶಯದ ಕಾಲುವೆಯ ನೀರನ್ನೇ ಅವಲಂಬಿಸಿದ್ದರು. ಆದರೆ, ಅಲ್ಲಿಯೂ ಕೇವಲ 72 ದಿನಗಳವರೆಗೆ ಮಾತ್ರ ಪೂರೈಸುವಷ್ಟು ನೀರಿದ್ದು, ಇದನ್ನರಿತು ಇಲ್ಲಿನ ಜನರು ಕಾಲುವೆ ನೀರನ್ನೇ ನಂಬಿಕೊಂಡು ಗೋವಿನಜೋಳ, ಬಿ.ಟಿ ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಿ ಕಾಲುವೆ ಮೂಲಕ ನೀರನ್ನು ಹರಿಸಲಾಗಿದೆ. ಆದರೆ, ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬುವ ವಾಣಿಯಂತೆ ಕಾಲುವೆ ನೀರು ಹರಿಸಿದ ಕೆಲವೇ ದಿನಗಳಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು, ಮೊದಲೆ ಕಾಲುವೆ ನೀರನ್ನು ಹರಿಸಿದ ಹೊಲಗಳೆಲ್ಲ ಹಸಿಯಾಗಿದ್ದವು. ಆದರೆ, ಸತತ ಮಳೆಯಾಗುತ್ತಿರುವುದರಿಂದ ರೈತರು ಬೆಳೆದ ಬೆಳೆಗಳಲ್ಲೆ ಹಳದಿಯಾಗಿ ಕೊಳೆತು ಹೋಗುತ್ತಿವೆ. ಮಳೆಯಾಗದೇ ಇದ್ದರೂ ರೈತನಿಗೆ ಕಷ್ಟ, ಅತಿಯಾಗಿ ಮಳೆಯಾದರೂ ಸಂಕಷ್ಟ ಅನುಭವಿಸುವವನು ರೈತನೇ ತಾನೆ.
ರೈತರ ಮೇಲೆ ತಾರತಮ್ಯ: ಕಳೆದ 15 ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಜಮೀನಿನಲ್ಲಿ ಕಾಲಿಡಲಾಗುತ್ತಿಲ್ಲ. ಇಷ್ಟು ದಿನ ಮಳೆಯಾಗದೇ ರೈತರು ಮಳೆಯಾಗುವಂತೆ ಎಲ್ಲ ದೇವರಲ್ಲಿ ಕೇಳಿಕೊಂಡಿದ್ದಾರೆ. ಆದರೆ, ಈಗ ಮಳೆ ಸಾಕು ಎಂದು ದೇವರಲ್ಲಿ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ. ಬಹುಶಃ ತಾಲೂಕಿನ ಎಲ್ಲ ರೈತರು ಬೆಳೆದ ಬೆಳೆಗಳೆಲ್ಲ ಮಳೆಗೆ ಸಿಲುಕಿ ಹಾಳಾಗಿವೆ. ಆದರೆ, ಜಿಲ್ಲಾಧಿಕಾರಿಗಳು ಮಾತ್ರ ಕೇವಲ ಬೆಣ್ಣೆಹಳ್ಳ ಅಕ್ಕಪಕ್ಕದಲ್ಲಿರುವ ಜಮೀನುಗಳನ್ನು ಮಾತ್ರ ಸರ್ವೇ ಮಾಡಿಸಿ ಮಳೆಯಿಂದ ಆಗಿರುವ ಹಾನಿ ಕುರಿತು ಬೆಳೆಹಾನಿ ನೀಡುತ್ತಿದ್ದಾರೆ. ಉಳಿದ ಕಡೆಗಳಲ್ಲಿ ರೈತರ ಬೆಳೆಗಳೆಲ್ಲ ಹಾಳಾಗಿ ಹೋಗಿದ್ದರೂ ಈ ಕುರಿತು ಗಮನಿಸದೇ ಜಾಣ ಕುರುಡುತನ ಅನುಸರಿಸುತ್ತಿರುವ ಜಿಲ್ಲಾಧಿಕಾರಿಗಳ ಕ್ರಮ ಖಂಡನಾರ್ಹ ಎಂಬುದು ಈ ಭಾಗದ ರೈತರ ಆರೋಪವಾಗಿದೆ. ಈಗಲಾದರೂ ಜಿಲ್ಲಾಧಿಕಾರಿಗಳು ತಾಲೂಕಿನಲ್ಲಿ ಸತತ ಮಳೆಯಿಂದಾಗಿ ಹಾನಿಗೊಳಗಾಗಿರುವ ರೈತರ ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕಾಗಿದೆ.
ಎಸ್.ಜಿ. ತೆಗ್ಗಿನಮನಿ