ಬಣವೆ ಭಸ್ಮಾಸುರರಿಗಿಲ್ಲ ಪೊಲೀಸರ ಭಯ
ಲಕ್ಷ್ಮೇಶ್ವರ: ದನ-ಕರುಗಳನ್ನು ಮೇಯಿಸಲು ಒಟ್ಟಿದ್ದ ಬಣವೆಯನ್ನು ಸುಟ್ಟ ದುಷ್ಕರ್ಮಿಗಳನ್ನು ಎರಡು ತಿಂಗಳಾದರೂ ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ.
ಈ ಕುರಿತು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಅವರೂ ಕ್ರಮಕ್ಕೆ ಮುಂದಾಗಿಲ್ಲ ಹಾಗೂ ಬಣವೆ ಸುಟ್ಟಿದ್ದಕ್ಕೆ ಯಾವುದೇ ಪರಿಹಾರ ನಮಗೆ ಇದುವರೆಗೂ ದೊರಕಿಲ್ಲ. ಮನೆಯಲ್ಲಿನ ದನಕರುಗಳನ್ನು ಹೇಗೆ ಸಾಕುವುದು ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ ಎಂದು ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮದ ಫಕ್ಕೀರಗೌಡ ಹೂವನಗೌಡ ಪಾಟೀಲರ ಆರೋಪಿಸಿದ್ದಾರೆ. ಕಳೆದ ಜುಲೈ 1ರಂದು ನಮ್ಮೂರಿನ ಇಬ್ಬರು ಆರೋಪಿಗಳಾದ ಜಯಪ್ಪ ಚಂದ್ರಪ್ಪ ಉಪ್ಪಾರ ಹಾಗೂ ನಾಗಪ್ಪ ಚಂದ್ರಪ್ಪ ಉಪ್ಪಾರ ನಮ್ಮ ಹೊಲದಲ್ಲಿ ಒಟ್ಟಿದ್ದ 3 ಟ್ರ್ಯಾಕ್ಟರ್ ಶೇಂಗಾ ಹೊಟ್ಟು ಹಾಗೂ 20 ಟ್ರ್ಯಾಕ್ಟರ್ ಮೇವಿನ ಬಣವೆಗೆ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. ಸುಮಾರು ರು. 3 ಲಕ್ಷ ಮೌಲ್ಯದಷ್ಟು ಹಾನಿಯಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಆದರೂ ಆರೋಪಿಗಳನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಎಸ್ಪಿಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಬಣವೆಯನ್ನು ಸುಟ್ಟ ಆರೋಪಿಗಳು ಮಾರಕಾಸ್ತ್ರದೊಂದಿಗೆ ನಮ್ಮ ಹೊಲದಲ್ಲಿ ಹಾಯ್ದು ನಿಮ್ಮನ್ನು ಉಳಿಸುವುದಿಲ್ಲ ಎಂದು ಮತ್ತೆ ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರೂ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಫಕ್ಕೀರಗೌಡ ಪಾಟೀಲ, ಮಂಜನಗೌಡ ಪಾಟೀಲ ನೊಂದು ನುಡಿಯುತ್ತಾರೆ.
ಪರಿಹಾರವಿಲ್ಲ: ಬಣವೆ ಸುಟ್ಟ ನಂತರ ಶಿರಹಟ್ಟಿ ತಹಸೀಲ್ದಾರ್ ಆರ್.ಡಿ. ಉಪ್ಪಿನವರು ಬಂದು ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಅವರಿಗೆ ಯಾವುದೇ ಪರಿಹಾರ ದೊರಕಿಲ್ಲ. ಸದ್ಯ ದನ ಕರುಗಳಿಗೆ ಮೇವು ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನಾದರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಶೀಘ್ರ ನಮ್ಮ ಕಷ್ಟಕ್ಕೆ ಸ್ಪಂದಿಸುವರೇ ಎನ್ನುವುದನ್ನು ಎದುರು ನೋಡುತ್ತಿದ್ದಾರೆ.