ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Mainashree
Updated On : 20 Sept 2013, 10:32 am

ಲಕ್ಷ್ಮೇಶ್ವರ: ಬಾರದಿರುವ ಬಸ್ಸಿಗಾಗಿ ಸಮೀಪದ ಸೂರಣಗಿ ಗ್ರಾಮಸ್ಥರು ಗುರುವಾರ ಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದರು.
ನಿತ್ಯ ಬಸ್ಸಿಗಾಗಿ ಕಾಯುತ್ತ ವಿದ್ಯಾರ್ಥಿ ಜೀವನ ವ್ಯರ್ಥಗೊಳಿಸುವಂತಾಗಿದೆ. ಬಸ್ಸಿಗಾಗಿ ಕಾಯುವುದು ನಿತ್ಯ ಕರ್ಮವಾಗಿ ಹೆಚ್ಚಿನ ವಿದ್ಯಾಭ್ಯಾಸ ಮೊಟಕುಗೊಳಿಸುವತ್ತ ಪಾಲಕರು ವಿಚಾರ ಮಾಡುವಂತಾಗಿದೆ. ತುರ್ತು ಕಾರ್ಯಗಳಿದ್ದರೆ ಬಸ್ ಕಾಯುವುದರಲ್ಲಿ ದಿನಪೂರ್ತಿ ಕಳೆದು ಹೋಗುತ್ತದೆ. ಗುರುವಾರವೂ ಬಸ್ ಬಾರದಿರುವುದಕ್ಕೆ ಆಕ್ರೋಶಗೊಂಡ ಸೂರಣಗಿ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಕೋಟೆಪ್ಪ ವರ್ದಿ ಮಾತನಾಡಿ, ಲಕ್ಷ್ಮೇಶ್ವರದಿಂದ ನಿತ್ಯ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ ನಿತ್ಯವೂ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹೋಗಲು ಹಾಗೂ ಸಂಜೆ ಮನೆಗೆ ವಾಪಸ್ ಬರಲು ಆಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಅಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ಬಸ್ಸುಗಳು ಸರಿಯಾಗಿ ಬಾರದ್ದರಿಂದ ಸಾಕಷ್ಟು ವಿದ್ಯಾರ್ಥಿಗಳು ಅಭ್ಯಾಸ ಮೊಟಕುಗೊಳಿಸಿದ್ದಾರೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಫಲಿತಾಂಶ ಶೂನ್ಯ, ಅದಕ್ಕಾಗಿ ಗ್ರಾಮಸ್ಥರು ಅನಿವಾರ್ಯವಾಗಿ ಹೋರಾಟ ಹಾದಿ ಹಿಡಿಯಬೇಕಾಯಿತು ಎಂದರು. ಲಕ್ಷ್ಮೇಶ್ವರದಿಂದ ಬೆಳ್ಳಟ್ಟಿಗೆ, ಬಾಲೆಹೊಸೂರ, ಗುತ್ತಲ ಹಾಗೂ ಸಾಸಲವಾಡ ಗ್ರಾಮಗಳಿಗೆ ಹೋಗಿ ಬರುವ ಬಸ್ಸುಗಳು ಸೂರಣಗಿ ಗ್ರಾಮಕ್ಕೆ ಸರಿಯಾದ ವೇಳೆಗೆ ಬರುತ್ತಿಲ್ಲ ಹಾಗೂ ಕೇವಲ 2-3 ಬಸ್ ಈ ಮಾರ್ಗವಾಗಿ ಸಂಚಾರ ಮಾಡುತ್ತಿವೆ. ಈ ಮಾರ್ಗದ ಮೇಲೆ ಇನ್ನೂ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು, ಸಂಜೆ 5 ಗಂಟೆಯ ವೇಳೆಯಲ್ಲಿ ಬೆಳ್ಳಟ್ಟಿಯಿಂದ ಗ್ರಾಮದ ಮೇಲೆ ಹಾಯ್ದು ಹೋಗಲು ಬಸ್ಸಿನ ವ್ಯವಸ್ಥೆ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಮನವಿ ಸ್ವೀಕರಿಸಿದ ಸಾರಿಗೆ ಅಧಿಕಾರಿ ಬದಿ ಮಾತನಾಡಿ, ಸೂರಣಗಿ ಗ್ರಾಮಕ್ಕೆ ಇನ್ನು ಮುಂದೆ ಹೆಚ್ಚಿನ ಬಸ್ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಫಕ್ಕಿರಯ್ಯ ಹಿರೇಮಠ, ಹನುಮಂತಪ್ಪ ಕಾಕೋಳ, ಬಾಬಣ್ಣ ಕಮ್ಮಾರ, ನಾಗಪ್ಪ ಕಾಸಿಕೋವಿ, ದುದ್ದುಸಾಬ ಗೋನಾಳ, ಬಾಬಣ್ಣ ಲಮಾಣಿ, ಕಮರುದ್ದೀನಸಾಬ ಗೋನಾಳ, ಶಶಿಧರ ದುರ್ಗದ, ಶರಣಪ್ಪ ಇಚ್ಚಂಗಿ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement