ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹದಗೆಟ್ಟ ರಸ್ತೆ

Mainashree
Updated On : 20 Sept 2013, 10:33 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಸೆ. 19
ನಬಾರ್ಡ್ ಯೋಜನೆ ಅಡಿಯಲ್ಲಿ ರು. 2 ಕೋಟಿ ವೆಚ್ಚದಲ್ಲಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಿಂದ ನಾಗರಮಡವು ಗ್ರಾಮದ ವರೆಗೆ 8 ಕಿ.ಮೀ. ವರೆಗಿನ ರಸ್ತೆ ಕಾಮಗಾರಿ ನಡೆದಿದ್ದು, ಈ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದ್ದು, ಕಾಮಗಾರಿ ಮುಗಿದು ನಾಲ್ಕು ತಿಂಗಳಲ್ಲಿ ರಸ್ತೆ ಮೇಲೆಲ್ಲ ಗುಂಡಿಗಳು ಬಿದ್ದಿವೆ.
ಈ ಭಾಗದ ಅನೇಕ ವರ್ಷಗಳ ಜನರ ಆಶಯದಂತೆ ಕಾಮಗಾರಿ ಪ್ರಾರಂಭವಾಗಿದ್ದು, ಕಾಮಗಾರಿ ಅವಧಿ, ಕಾಮಗಾರಿಯ ಗುಣಮಟ್ಟದ ಬಗ್ಗೆ ವಿವರ, ಎಷ್ಟು ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಯಾವ ಹಂತದಲ್ಲಿ ಕಾಮಗಾರಿ ಮಾಡಬೇಕು ಎಂಬುದರ ಬಗ್ಗೆ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಆಗಲಿ, ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಲೋಕೋಪಯೋಗಿ ಇಲಾಖೆ ಅಭಿಯಂತರ ಎಲ್.ಎ. ಬಾಳಿ ಎಲ್ಲಿಯೂ ಸಾರ್ವಜನಿಕರಿಗೆ ಕಾಮಗಾರಿಯ ವಿವರಣೆ ನೀಡುವ ನಾಮಫಲಕ ಹಾಕದೇ ಮನಸೋ ಇಚ್ಛೆ ತರಾತುರಿಯಲ್ಲಿ ಕಾಮಗಾರಿ ಮುಗಿಸಿದ್ದಾರೆ. ಇದು ಕಳಪೆ ಗುಣಮಟ್ಟಕ್ಕೆ ಕಾರಣವಾಗಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬರುತ್ತಿದೆ.
ತಳಪಾಯ ಗಟ್ಟಿ ಮಾಡಿಲ್ಲ: ಅನೇಕ ವರ್ಷಗಳಿಂದ ಈ ಮಾರ್ಗವಾಗಿ ಸಂಚರಿಸಲು ಕೊಂಚಿಗೇರಿ, ಬಿಜ್ಜೂರ, ನಾಗರಮವು ಗ್ರಾಮದ ಜನತೆ ತೊಂದರೆ ಅನುಭವಿಸುತ್ತಿದ್ದರು. ಕಾಮಗಾರಿ ಆರಂಭವಾದಾಗ ಹರ್ಷ ಪಟ್ಟ ಗ್ರಾಮಸ್ಥರು ಕೇವಲ ನಾಲ್ಕು ತಿಂಗಳಲ್ಲಿ ಹದಗೆಟ್ಟ ರಸ್ತೆಯನ್ನು ನೋಡಿ ಕಳಪೆ ಕಾಮಗಾರಿ ಮಾಡಿ ಕೋಟ್ಯಂತರ ಹಣದ ಅವ್ಯವಹಾರ ನಡೆಸಿದ ಅಧಿಕಾರಿಗಳ ಮೇಲೆ ಹರಿಹಾಯುತ್ತಿದ್ದಾರೆ. ಸರಿಯಾಗಿ ಮೆಟ್ಲಿಂಗ್ ಮಾಡಿ, ರೂಲ್ ಹೊಡೆದು ತಳಪಾಯ ಗಟ್ಟಿ ಮಾಡದೇ ಕಾಮಗಾರಿ ನಡೆಸಿದ್ದು, ಸಂಪೂರ್ಣ ಕಳಪೆಯಾಗಿದೆ ಎಂದು ದೂರುತ್ತಾರೆ.
ಮಳೆಗಾಲ ಆರಂಭವಾಗುವ ಸಮಯದಲ್ಲಿ ಕಾಮಗಾರಿ ಕೈಗೆತ್ತಿಕೊಂಡು ತರಾತುರಿಯಲ್ಲಿ ಯೋಜನೆಯಂತೆ ಕಾಮಗಾರಿ ಮಾಡದೇ, ಗುಣಮಟ್ಟದ ಡಾಂಬರ್ ಮಿಶ್ರಣ ಮಾಡಿ ರಸ್ತೆಗೆ ಹಾಕದಿರುವುದರಿಂದ ಅಲ್ಲಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದು, ಕಾಮಗಾರಿ ಕಳಪೆಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಕೋಟ್ಯಂತರ ಹಣ ಲೂಟಿ: ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಮುಖ್ಯ ಅಧೀಕ್ಷಕ, ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್, ಸೆಕ್ಷನ್ ಎಂಜಿನಿಯರ್ ಹಾಗೂ ಗುಣನಿಯಂತ್ರಣ ವಿಭಾಗದ ಅಧಿಕಾರಿಗಳು ಯಾವುದನ್ನು ಪರಿಶೀಲನೆ ಮಾಡದೇ ಕಣ್ಣುಮುಚ್ಚಿ ಸಹಿ ಮಾಡಿ ಬಿಲ್ ತೆಗೆದಿದ್ದಾರೆ. ಇದನ್ನು ತಡೆಗಟ್ಟದೇ ಇರುವುದರಿಂದ ಸರ್ಕಾರದ ಕೋಟ್ಯಂತರ ಹಣ ಲೂಟಿ ಆಗುತ್ತಿದೆ. ರಸ್ತೆ ನಿರ್ವಹಣೆ ಅವಧಿ ಇದೆ ಅಂತಾ ಹೇಳುತ್ತ ಕೋಟ್ಯಂತರ ಹಣ ಲೂಟಿ ಮಾಡುತ್ತಿದ್ದು, ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement