ಹೈ-ಕ ಜನರ ಬವಣೆ ದೂರವಾಗಲಿ
ಗದಗ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿದ್ದ ರಾಜ್ಯದ 5 ಜಿಲ್ಲೆಗಳು ನಿಜಾಮರ ಆಡಳಿತದಲ್ಲಿ ಹೆಚ್ಚು ಸಂಕಷ್ಟ ಎದುರಿಸಿವೆ. ಇಂದಿಗೂ ಹಿಂದುಳಿದಿರುವ ಈ ಜಿಲ್ಲೆಗಳಿಗೆ ವಿಶೇಷ ಕಾಳಜಿಯ ಅಗತ್ಯವಿದ್ದೆ ಇತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ 371ನೇ ವಿಧಿ ಮೂಲಕ ಹೈ.ಕಕ್ಕೆ ವಿಶೇಷ ಸ್ಥಾನಮಾನ ಜಾರಿಗೊಳಿಸಿದ್ದು ಸ್ತುತ್ಯ, ಜನರ ಬವಣೆ ದೂರವಾಗಿಸಿ ಅಭಿವೃದ್ಧಿ ಸಾಧಿಸಲು ವಿಶೇಷ ಸ್ಥಾನಮಾನ ಯೋಜನೆ ಸೋಪಾನವಾಗಲಿ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಈಚೆಗೆ ನಗರದ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ನಡೆದ 2137ನೇ ಶಿವಾನುಭವದಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಆಂಗವಾಗಿ ವಿಮೋಚನಾ ಚಳವಳಿ ಸಂಸ್ಮರಣೆ ಹಾಗೂ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಇಡೀ ದೇಶ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಪಾರಾದರೂ ಹೈದ್ರಾಬಾದ್ ಕರ್ನಾಟಕ ಭಾಗದ 5 ಜಿಲ್ಲೆಗಳ ಜನರ ದಾಸ್ಯ ಮುಗಿದಿರಲಿಲ್ಲ. ವಲ್ಲಭಭಾಯಿ ಪಟೇಲ್ರಂತಹ ಮಂತ್ರಿಗಳ ಪ್ರಬಲ ಇಚ್ಛಾಶಕ್ತಿ ಅಂದಿನ ಭಾರತೀಯ ಮಿಲಿಟರಿಯ ಕಾರ್ಯಾಚರಣೆಯಿಂದ ಹೈದ್ರಾಬಾದ್ ನಿಜಾಮನ ಆಡಳಿತ ಕೊನೆಗೊಂಡು, ತದನಂತರ ಸ್ವತಂತ್ರ ಭಾರತದ ಒಕ್ಕೂಟ ವ್ಯವಸ್ಥೆಗೆ ಇಂದಿನ ಹೈದ್ರಾಬಾದ್ ಕರ್ನಾಟಕ ಭಾಗಗಳು ಸೇರಿಸಲ್ಪಟ್ಟವು.
ಉರ್ದುಭಾಷೆ ಬಗ್ಗೆ ವಿಶೇಷ ಒತ್ತಾಸೆ ಹೊಂದಿದ್ದ ಹೈದ್ರಾಬಾದ್ ನಿಜಾಮ ಆಡಳಿತ ಕಾಲದಲ್ಲಿ ಸ್ಥಾಪನೆಗೊಂಡಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅವಾಗಲೆ ಸ್ನಾತಕೋತ್ತರ ಪದವಿ ಪರೀಕ್ಷೆ, ಎಂಬಿಬಿಎಸ್ ಪರೀಕ್ಷೆಯನ್ನು ಕೂಡ ಉರ್ದು ಭಾಷೆಯಲ್ಲಿಯೇ ನಡೆಸುವ ವ್ಯವಸ್ಥೆ ಜಾರಿಗೆ ತಂದಿದ್ದರೆಂಬುದು ಕನ್ನಡ ನಾಡಿನ ಆಡಳಿತಗಾರರಿಗೆ ಮಾದರಿಯಾದ ವಿಚಾರವಾಗಿದೆ ಎಂದರು. ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ಕೆ.ವೆ. ಕನ್ನೂರ ಅವರು ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿ ಮತ್ತು ಜನರ ಸಂಕಷ್ಟಗಳು ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿ ಎಸ್.ಕೆ. ಮೇಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ ಮುಂತಾದವರು ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಗೌರವ ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ ಸ್ವಾಗತಿಸಿದರು. ಶಿವಾನುಭವ ಸಮಿತಿ ಚೇರ್ಮನ್ ಪ್ರೊ. ಎಸ್.ಎನ್. ಆದಿ ಪರಿಚಯಿಸಿದರು. ಜಿ.ಪಿ. ಕಟ್ಟಿಮನಿ ನಿರೂಪಿಸಿದರು.