ಟೋಪಣ್ಣಗೆ ಕನಕ ಟೋಪಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಸೆ. 20
ರೈತರಿಗೆ ಮಕ್ಮಲ್ ಟೋಪಿ ಹಾಕಲು ನಕಲಿ ಬೀಜಗಳ ಗೊಬ್ಬರಗಳ, ಕ್ರಿಮಿನಾಶಕ ಕಂಪನಿಗಳು ನಾ ಮುಂದು ತಾ ಮುಂದು ಎಂದು ಪೈಪೋಟಿ ನೀಡುತ್ತಿವೆ.
ಈ ಸಾಲಿಗೆ ಈಗ ಕನಕ ಬಿಟಿ ಹತ್ತಿ ಬೀಜದ ಕಂಪನಿಯೂ ಸೇರಿಕೊಂಡಿದೆ. ಲಕ್ಷ್ಮೇಶ್ವರ ಸಮೀಪದ ದೊಡ್ಡೂರ ತಾಂಡಾದ ರೈತ ಟೋಪಣ್ಣ ಲಮಾಣಿ ತನ್ನ 10 ಎಕರೆ ನೀರಾವರಿ ಜಮೀನಿನಲ್ಲಿ 3 ತಿಂಗಳ ಹಿಂದೆ ಲಕ್ಷಾಂತರ ಹಣ ಖರ್ಚು ಮಾಡಿ ಕನಕ ಬಿಟಿ ಹತ್ತಿಯನ್ನು ಬಿತ್ತಿದ್ದಾನೆ. ಕಾಲ ಕಾಲಕ್ಕೆ ಸರಿಯಾಗಿ ನೀರು, ಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿ ಅತ್ಯಂತ ಶ್ರಮವಹಿಸಿ ಸದೃಢವಾಗಿ ಬಿಟಿ ಹತ್ತಿಯನ್ನು ಬೆಳೆಸಿದ್ದಾನೆ. ಉತ್ತಮ ಹತ್ತಿ ಬೆಳೆಯ ನಿರೀಕ್ಷೆಯಲ್ಲಿದ್ದ ರೈತನಿಗೆ ಸದ್ಯ ಬರಸಿಡಿಲು ಬಡಿದಂತಾಗಿದೆ. ಸಾಮಾನ್ಯವಾಗಿ ಬಿಟಿ ಹತ್ತಿಯ ಗಿಡಗಳು 80 ರಿಂದ 100 ಕಾಯಿಗಳನ್ನು ಬಿಡುತ್ತವೆ. ಆದರೆ ಟೋಪಣ್ಣ ಲಮಾಣಿ ಹೊಲದಲ್ಲಿರುವ ಬಿಟಿ ಹತ್ತಿಯು ಎದೆಯ ಮಟ್ಟಕ್ಕೆ ಬೆಳೆದಿದ್ದು, ಗಿಡಗಳಲ್ಲಿ ಕೇವಲ 5-6 ಕಾಯಿಗಳು ಮಾತ್ರ ಕಾಣಸಿಗುತ್ತಿವೆ. ಒಂದು ಎಕರೆ ಹೊಲದಲ್ಲಿ ಸುಮಾರು 8-10 ಕ್ವಿಂಟಾಲ್ ಹತ್ತಿಯನ್ನು ಬೆಳೆಯಬಹುದಾಗಿದೆ. ಆದರೆ ಟೋಪಣ್ಣನ ಹೊಲದಲ್ಲಿರುವ ಬಿಟ್ಟಿ ಹತ್ತಿಯಿಂದ ಪ್ರತಿ ಎಕರೆಗೆ 1 ಕ್ವಿಂಟಾಲ್ ಹತ್ತಿಯೂ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ರೈತರು ಬೇರೆ ಬೇರೆ ಬಿಟಿ ಹತ್ತಿ ಬೆಳೆಯನ್ನು ಬೆಳೆದು ಸಂತಸದಲ್ಲಿರುವಾಗ ನಕಲಿ ಕನಕ ಬಿಟಿ ಹತ್ತಿ ಬೀಜಗಳನ್ನು ಬಿತ್ತಿ ಟೋಪಣ್ಣ ಲಮಾಣಿ ಸೇರಿದಂತೆ ಇನ್ನು ಹಲವು ರೈತರು ಕಂಗಾಲಾಗಿದ್ದಾರೆ.
8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಬಿತ್ತನೆ
ಲಕ್ಷ್ಮೇಶ್ವರ ಹೋಬಳಿಯಲ್ಲಿ ಸುಮಾರು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿಯನ್ನು ಬಿತ್ತನೆ ಮಾಡಲಾಗಿದೆ. ಅವುಗಳಲ್ಲಿ ಕೆಲ ಹತ್ತಿ ತಳಿಗಳ ಬೀಜಗಳಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ಆದರೆ ದೊಡ್ಡೂರ ಮತ್ತು ಸೂರಣಗಿಯ ತಾಂಡಾಗಳ ರೈತರು ಬೆಳೆದ ನೂರಾರು ಎಕರೆ ಹೊಲದಲ್ಲಿನ ಕಳಪೆ ಗುಣಮಟ್ಟದ ನಕಲಿ ಕನಕ ಬಿಟಿ ಹತ್ತಿ ಬೀಜವನ್ನು ಬಿತ್ತಿ ಮೋಸಹೋಗಿದ್ದಾರೆ. ಎದೆ ಮಟ್ಟದಲ್ಲಿ ಬೆಳೆದ ಬೆಳೆಯಲ್ಲಿ ನಾಲ್ಕಾರು ಕಾಯಿಗಳು ಮಾತ್ರ ಇದ್ದು, ಅವುಗಳು ಕೂಡಾ ಕಪ್ಪಾಗಿ ಹತ್ತಿ ಒಡೆಯದೆ ಹಾಗೆ ಇರುವುದು ರೈತರ ನಿದ್ದೆಗೆಡಿಸಿದೆ. ನಕಲಿ ಕನಕ ಬೀಜ ನೀಡಿದ ಕಂಪನಿಯ ವಿರುದ್ಧ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಲು ರೈತರು ಚಿಂತನೆ ನಡೆಸಿದ್ದಾರೆ.
-ಅಶೋಕ ಸೊರಟೂರ