ಮೂಲಸೌಲಭ್ಯಕ್ಕಾಗಿ ಹೊರಟ್ಟಿಗೆ ಘೇರಾವ್
ಶಿರಹಟ್ಟಿ: ಪಟ್ಟಣದ ಶ್ರೀ ಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನೇಕ ವರ್ಷಗಳಿಂದ ಯಾವುದೇ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶಾಸಕರಿಗೆ, ಸಚಿವರಿಗೆ, ಸಂಬಂಧಪಟ್ಟ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನೀವಾದರೂ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರಿಗೆ ವಿದ್ಯಾರ್ಥಿಗಳು ಘೇರಾವ್ ಹಾಕಿ ಪ್ರತಿಭಟಿಸಿದರು.
ಕಾಲೇಜಿಗೆ ಭೇಟಿ ನೀಡಿದ ಸಂದರ್ಭ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿಗಳು ಮಾಜಿ ಸಚಿವರಿಗೆ ಮುತ್ತಿಗೆ ಹಾಕಿ ಕಾಲೇಜಿನಲ್ಲಿಯ ಅವ್ಯವಸ್ಥೆ ಕುರಿತು ಗಮನ ಸೆಳೆದರು. ಶೈಕ್ಷಣಿಕ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ವಾಸ್ತವದಲ್ಲಿ ಈ ಹೇಳಿಕೆ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಅಗತ್ಯ ಉಪನ್ಯಾಯಕರ ಕೊರತೆ ವಿದ್ಯಾರ್ಥಿಗಳ ಓದಿಗೆ ತೊಡಕಾಗಿದೆ ಎಂದು ಸಮಸ್ಯೆ ಬಿಚ್ಚಿಟ್ಟರು.
ಸರ್ಕಾರಿ ಕಾಲೇಜಿನಲ್ಲಿ ಇತಿಹಾಸ, ಅರ್ಥಶಾಸ್ತ್ರ, ಕನ್ನಡ, ಇಂಗ್ಲಿಷ್ ವಿಷಯಗಳ ಕಾಯಂ ಉಪನ್ಯಾಸರು, ದೈಹಿಕ ಶಿಕ್ಷಕ, ಗ್ರಂಥಪಾಲಕ, ಬೆರಳಚ್ಚುಗಾರರ ಹುದ್ದೆಗಳು ಖಾಲಿ ಇವೆ. ಸುಸಜ್ಜಿತವಾದ ಆಟದ ಮೈದಾನವಿಲ್ಲ. ಸರಿಯಾಗಿ ಕುಳಿತುಕೊಂಡು ಅಭ್ಯಸಿಸಲು ಕೊಠಡಿಗಳಿಲ್ಲ. ಇದೆಲ್ಲವೂ ಪ್ರಾಂಶುಪಾಲರ ಗಮನಕ್ಕೆ ಬಂದರೂ ಮೂಲಸೌಲಭ್ಯ ಒದಗಿಸುವಲ್ಲಿ ಬೇಜವಾಬ್ದಾರಿ ತೋರಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು. ಈ ಹಿಂದೆ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲ ಸ್ಥಿತಿಗತಿ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ವಿದ್ಯಾರ್ಥಿಗಳೇ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಗಮನ ಸೆಳೆದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕಾಲೇಜು ಆರಂಭವಾದಾಗಿನಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈಗಾಗಲೇ ಕಾಲೇಜಿನಲ್ಲಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಿಎ, ಬಿಬಿಎ ಪದವಿಗಳಲ್ಲಿ ಅಭ್ಯಸಿಸುತ್ತಿದ್ದಾರೆ. ತಾವಾದರೂ ತುರ್ತಾಗಿ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಮಾಜಿ ಸಚಿವ ಬಸವರಾಜ ಹೊರಟ್ಟಿ ತಕ್ಷಣವೇ ಕಾಲೇಜು ಶಿಕ್ಷಣ ಇಲಾಖೆ ಕಮೀಷನರ್ ನಂದಕುಮಾರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಮಗೆ ಘೇರಾವ್ ಹಾಕಿ, ಸೌಲಭ್ಯ ಕಲ್ಪಿಸಿಕೊಡಲು ಭರವಸೆ ನೀಡುವಂತೆ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದರು.
ಕಮೀಷನರ್ ಭರವಸೆಯಂತೆ ನನಗೆ ನವೆಂಬರ್ವರೆಗೆ ಕಾಲಾವಕಾಶ ಕೊಡಿರಿ. ಅಷ್ಟರೊಳಗಾಗಿ ಕಾಲೇಜಿಗೆ ಮೂಲಸೌಲಭ್ಯ ಮತ್ತು ಕಾಯಂ ಉಪನ್ಯಾಸಕರ ನೇಮಕಾತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಂತರ ಕಾಲೇಜು ಪ್ರಾಂಶುಪಾಲ ವಿ.ಪಿ. ಸಮೋರೆಕರ ಅವರೊಂದಿಗೆ ಮಾತುಕತೆ ನಡೆಸಿದ ಅವರು, ಇಲ್ಲಿಯವರೆಗೂ ಕಾಲೇಜಿನ ಸ್ಥಿತಿ-ಗತಿ, ಆಗು-ಹೋಗುಗಳ ಬಗ್ಗೆ ತಾವು ಸರ್ಕಾರಕ್ಕೆ ಏನಾದರೂ ಪ್ರಸ್ತಾವನೆ ಸಲ್ಲಿಸಿದ್ದರೆ ಅದರ ಸಮಗ್ರ ವರದಿ ಕಳುಹಿಸಿಕೊಡುವಂತೆ ಸೂಚನೆ ನೀಡಿದರು. ಜತೆಗೆ ವಿದ್ಯಾರ್ಥಿಗಳು ತಮ್ಮ ಕಾಲೇಜಿಗೆ ಬೇಕಾದ ಸೌಲಭ್ಯಗಳ ಪಟ್ಟಿ ಸಿದ್ಧಪಡಿಸಿ ಕಳಿಸಿಕೊಡುವಂತೆ ತಿಳಿಸಿದರು.