ಅಡುಗೆ ಸಹಾಯಕರ ಕಿರುಕುಳ ತಪ್ಪಿಸಲು ಆಗ್ರಹ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 21
ಸ್ಥಳೀಯ ವಾಣಿಪೇಟೆ ಬಳಿಯ ಬಿಸಿಎಂ ಹಾಸ್ಟೆಲ್ನಲ್ಲಿ ಅಡುಗೆ ಸಹಾಯಕರು ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ ಕಿರುಕುಳ ನೀಡುತ್ತಿದ್ದಾರೆ ಜತೆಗೆ ಹಾಸ್ಟೆಲ್ನಲ್ಲಿ ಮೂಲ ಸೌಲಭ್ಯ ಕೊರತೆ ಇದೆ ಎಂದು ಆರೋಪಿಸಿ ಶನಿವಾರ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಬಡ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಸರ್ಕಾರ ವಿದ್ಯಾರ್ಥಿಗಳಿಗೆ ಪಠ್ಯ, ಪುಸ್ತಕ, ಸಮವಸ್ತ್ರ, ಬಿಸಿಯೂಟ ಜತೆ ಉಚಿತ ವಸತಿ ಸೇವೆಯನ್ನು ನೀಡಲು ಶಿಕ್ಷಣ ಇಲಾಖೆಯಿಂದ ಪ್ರತಿವರ್ಷ ಸಾವಿರಾರು ಕೋಟಿ ಹಣ ಅನುದಾನ ವಿನಿಯೋಗಿಸುತ್ತದೆ. ಆದರೆ, ವ್ಯವಸ್ಥೆಯ ಲೋಪದಿಂದ ಯೋಜನೆ ಹಳ್ಳ ಹಿಡಿಯುತ್ತಿವೆ ಎನ್ನುವುದಕ್ಕೆ ಇಂತಹ ವಸತಿ ಶಾಲೆಗಳು ಉದಾಹರಣೆಯಾಗಿವೆ.
50 ವಿದ್ಯಾರ್ಥಿಗಳಿರುವ ಈ ಹಾಸ್ಟೆಲ್ನಲ್ಲಿ ಮಕ್ಕಳಿಗೆ ಸುಲಭ ಶೌಚಾಲಯ ಜತೆ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಸರ್ಕಾರ ನೀಡಿರುವ ಅನುದಾನದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ನಿಲಯ ಸಹಾಯಕರಿಗೆ ಅಡುಗೆ ಸಹಾಯಕ ಕೆ.ಕೆ ಸಪ್ತಾಳಕರ ನಿತ್ಯ ಕುಡಿದು ಬಂದು ತನ್ನ ಕರ್ತವ್ಯ ನಿರ್ವಹಿಸದೆ ವಿದ್ಯಾರ್ಥಿಗಳಿಗೆ ಬಾಯಿಗೆ ಬಂದಂತೆ ಬೈದು ಜತೆಗೆ ಹಲವಾರು ವಿದ್ಯಾರ್ಥಿಗಳಿಗೆ ಹೊಡೆದಿದ್ದಾನೆ. ಈತನ ವರ್ತನೆ ಬಗೆಗೆ ಹಲವಾರು ಬಾರಿ ಮೇಲಧಿಕಾರಿಗಳು ಈತನಿಗೆ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದರು.
ಪ್ರತಿಭಟನೆ ಕುರಿತು ನಿಲಯ ಮೇಲ್ವಿಚಾರಕ ಎಂ.ಬಿ. ಜಯವಾಡಗಿ ತಾಲೂಕು ವಿಸ್ತರಣಾಧಿಕಾರಿಗಳ ಗಮನಕ್ಕೆ ತಂದರೂ ಕೂಡಲೇ ಹಾಸ್ಟೆಲ್ಗೆ ತಾಲೂಕು ವಿಸ್ತರಣಾಧಿಕಾರಿ ಎಸ್.ಎಸ್.ಇಟೇಕರ ಆಗಮಿಸಿ ವಿದ್ಯಾರ್ಥಿಗಳ ಅಳಲು ಆಲಿಸಿ ಈ ಕ್ಷಣದಿಂದಲೇ ಅಡುಗೆ ಸಹಾಯಕನನ್ನು ಬೇರೆಡೆಗೆ ವರ್ಗಾಯಿಸಲಾಗುವುದು. ಜತೆಗೆ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗಾಗುವ ತೊಂದರೆ ಬಗೆಗೆ ಜಿಲ್ಲಾ ನಿಲಯ ವ್ಯವಸ್ಥಾಪಕರ ಗಮನಕ್ಕೆ ತರುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಹಾಸ್ಟೆಲಿನಲ್ಲಿ 10 ವರ್ಷದಿಂದ ಅಡುಗೆ ಮಾಡುತ್ತಿದ್ದ ಮಹಿಳೆಯರು ನಮಗೆ ತಿಂಗಳಿಗೆ ಕೇವಲ ರು. 3 ಸಾವಿರ ವೇತನ ನೀಡುತ್ತಿದ್ದು, ಇದರಿಂದ ಸಂಸಾರ ನಡೆಸಲು ಕಷ್ಟವಾಗುತ್ತಿದೆ. ಹೆಚ್ಚಿನ ವೇತನ ನೀಡಲು ವಿನಂತಿಸಿದರು. ಅವರ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.