ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೃಷಿಯಲ್ಲೂ ರೈತರ ನೂತನ ಆವಿಷ್ಕಾರ

Vishwanath S
Updated On : 22 Sept 2013, 12:10 pm

ನರೇಗಲ್ಲ: ಮನುಷ್ಯನ ಆಲೋಚನೆ ಆವಿಷ್ಕಾರಗಳಿಗೆ ಮಿತಿಯೇ ಇಲ್ಲ. ವಿಜ್ಞಾನಿಗಳು ಸಹ ಕಂಡು ಹಿಡಿಯದಂತಹ ಹೊಸ ಆವಿಷ್ಕಾರಗಳನ್ನು ರೈತರು ಕಂಡುಹಿಡಿದು ಅವುಗಳನ್ನು ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುತ್ತಿರುವುದು ಹೊಸ ಪ್ರಗತಿಗೆ ಹಿಡಿದ ಕೈಗನ್ನಡಿ.
ಹಾಗೆಯೇ ಇಲ್ಲೊಂದಿಬ್ಬರು ರೈತರು ತಮ್ಮ ಕೃಷಿಯಲ್ಲಿ ಹೊಸ ಪದ್ದತಿ ಅಳವಡಿಸಿಕೊಂಡು ಇತರೆ ರೈತರು ಅಚ್ಚರಿ ಪಡುವಂತೆ ಮಾಡಿದ್ದಾರೆ.
ಹೌದು..ರೈತರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ನಡುವೆಯೂ ನರೇಗಲ್ಲ ಪಟ್ಟಣದ ಪ್ರಗತಿಪರ ರೈತ ಪ್ರದೀಪ ಹುಯಿಲಗೋಳಮಠ ಹಾಗೂ ಮಹ್ಮದ ನದಾಫ ಸ್ಕೂಟರ್ ಮೂಲಕ ಈರುಳ್ಳಿ ಬಿತ್ತನೆ ಮಾಡಿದರೆ, ಗ್ರಾಮದ ಇನ್ನೊಬ್ಬ ರೈತ ಶಿದ್ದಪ್ಪ ತೇಜಪ್ಪನವರು ಮಕ್ಕಳಾದ ರವೀಂದ್ರ ಹಾಗೂ ಶಿವಪ್ಪನ ಸಹಾಯದಿಂದ ತಮ್ಮದೆ ಆದ ಟಾಟಾಏಸ್ ವಾಹನದಿಂದ ರೆಂಟೆ ಹೊಡೆಯುವ ಮೂಲಕ ಕೃಷಿಯಲ್ಲಿ ಹೊಸತನ ಮೆರೆದಿದ್ದಾರೆ.
ಖರ್ಚು ಕಡಿಮೆ...
ಸ್ಕೂಟರ್‌ನಿಂದ ದಿನಕ್ಕೆ 2 ಎಕರೆ ಈರುಳ್ಳಿ ಬೀಜ ಬಿತ್ತಿ, ಇತರೆ ರೈತರಿಗೆ ಮಾದರಿಯಾಗಿದ್ದು, ಇದರಿಂದ ಬಿತ್ತಲು ಬಳಸಿದ ಸ್ಕೂಟರ್‌ಗೆ 1.5 ಲೀಟರ್ ಪೆಟ್ರೋಲ್ ವೆಚ್ಚವಾಗಿದೆ. ಆದರೆ, ಇದೇ ಜಮೀನನ್ನು ಟ್ರ್ಯಾಕ್ಟರ್‌ನಿಂದ ಬಿತ್ತನೆ ಮಾಡಿದರೆ 1 ಎಕರೆಗೆ ರು. 800ರಿಂದ 1 ಸಾವಿರ ಪಡೆಯುತ್ತಾರೆ. ಅದೇ ರೀತಿ ಎತ್ತುಗಳಿಂದ ದಿನಕ್ಕೆ 3 ಎಕರೆ ಬಿತ್ತಿದರೆ 1200 ಬೇಕಾಗುತ್ತದೆ. ಆದರೆ, ಈ ರೈತರು ಪೆಟ್ರೋಲ್‌ಗಾಗಿ ವೆಚ್ಚ ಮಾಡಿದ್ದು ಕೇವಲ 200 ಮಾತ್ರ.
ಹೊಸ ಹೊಸ ಪರಿಕರಗಳ ಪರಿಚಯ..
ಪ್ರತಿ ವರ್ಷ ಒಂದಿಲ್ಲೊಂದು ಕೃಷಿ ಯಂತ್ರ ಹಾಗೂ ಇಂದಿನ ದಿನಮಾನಕ್ಕೆ ಹೊಂದಿಕೊಳ್ಳುವ ಕೃಷಿ ಪರಿಕರಗಳನ್ನು ರೈತರಿಗೆ ಪರಿಚಯಿಸುತ್ತಾ ಬಂದಿದ್ದಾರೆ. ಕಳೆದ ವರ್ಷ 3 ಎಕರೆ ಕಡಲೆ ಬಿತ್ತಿದ್ದು, ಉತ್ತಮ ಇಳುವರಿ ಪಡೆದಿದ್ದಾರೆ. ಬೀಜ ಬಿತ್ತನೆ ಮಾಡುವ ಮಹ್ಮದ ನದಾಫ, ಕಳೆದ ವರ್ಷ 2 ತಾಳಿನ ಎಡೆ ಕುಂಟಿ ತಯಾರಿಸಿ ಕಬ್ಬಿಣದ ಸಣ್ಣ ತಾಳುಗಳನ್ನು ಮಾಡಿಸಲಾಗಿದೆ. 2.5ರಿಂದ 3 ಇಂಚು ಅಗಲದ ತಾಳುಗಳನ್ನು ಹಾಯಿಸಿ 3 ಜನರು ಸೇರಿ ಬಿತ್ತಲಾಗಿದೆ. ಸಾಲಿನಿಂದ ಸಾಲಿಗೆ ಇರುವ ಅಂತರ 2 ಫೀಟ್. ಇದರಿಂದ ಉತ್ತಮ ಇಳುವರಿ ಪಡೆಯಲಾಗಿದೆ.
ಅದೇ ರೀತಿ ಇನ್ನೊಬ್ಬ ರೈತ ಸಮೀಪದ ತೋಟಗಂಟಿ ಗ್ರಾಮದ ಶಿದ್ದಪ್ಪ ತೇಜಪ್ಪನವರ ಸಹ ಹೊಸ ಆವಿಷ್ಕಾರಕ್ಕೆ ಮುಂದಾಗಿದ್ದು, ಇವರು ತಮ್ಮ ಟಾಟಾಏಸ್ ವಾಹನವನ್ನೇ  ಹೊಲ ಹರಗಲು ಉಪಯೋಗಿಸಿದ್ದಾರೆ. ಈ ವಾಹನದಿಂದ ದಿನಕ್ಕೆ 4ರಿಂದ 6 ಎಕರೆ ಹೊಲ ಹರಗಲು 3 ಲೀಟರ್ ಡೀಜೆಲ್( 200) ವೆಚ್ಚವಾಗಿದೆ. ಆದರೆ, ಇದೇ ಜಮೀನನ್ನು ಟ್ರಾಕ್ಟರ್ ಅಥವಾ ಎತ್ತುಗಳಿಂದ ಹರಗಿದರೆ ರು. 800ರಿಂದ 1500 ಖರ್ಚಾಗುತ್ತಿತ್ತು.
 ಈ ಇಬ್ಬರು ರೈತರಾದ ಪ್ರದೀಪ ಹುಯಿಲಗೊಳಮಠ ಹಾಗೂ ಸಿದ್ದಪ್ಪ ತೇಜಪ್ಪನವರ ಹೊಲಗಳು ಅಕ್ಕಪಕ್ಕದಲ್ಲಿರುವುದರಿಂದ ಇಬ್ಬರೂ ಸೇರಿ ಈ ಹೊಸ ಯೋಜನೆಗೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ.

-ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement