ಚಾಲ್ತಿ ಖಾತೆ ಕೊರತೆಯಿಂದ ರುಪಾಯಿ ಅಪಮೌಲ್ಯ
ನರೇಗಲ್ಲ: ದೇಶದ ಆರ್ಥಿಕತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಡಾಲರ್ ಎದುರು ರುಪಾಯಿ ಕುಸಿಯಲು ಚಾಲ್ತಿ ಖಾತೆಯಲ್ಲಿನ ಕೊರತೆ ಮತ್ತು ಪೆಟ್ರೋಲಿಯಂ ವಿಪರೀತ ಆಮದು ಕಾರಣವಾಗಿದೆ ಎಂದು ಪ್ರಾಚಾರ್ಯ ವೈ.ಸಿ.ಪಾಟೀಲ ಹೇಳಿದರು.
ಸೋಮವಾರ ವಿಶ್ವ ಓಜೋನ ದಿನದ ನಿಮಿತ್ತ ಇಂಧನ ಉಳಿತಾಯ ಸಪ್ತಾಹ ದಿನಾಚರಣೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಇಂದು ಬಂಗಾರದ ಆಮದು ಅಧಿಕವಾಗಿದ್ದು, ಅದನ್ನು ಒಂದು ವರ್ಷದವರೆಗೆ ಜನರು ಖರೀದಿಸದೇ ಮುಂದಕ್ಕೆ ಹಾಕಿ ದೇಶದ ಆರ್ಥಿಕತೆ ಬಲಿಷ್ಠವಾಗಲು ಸಹಾಯ ಮಾಡಬೇಕು ಹಾಗೂ ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು. ಇದರಿಂದ ಚಾಲ್ತಿ ಖಾತೆಯ ಕೊರತೆಯನ್ನು ಸರಿಪಡಿಸಬಹುದು ಹಾಗೂ ರುಪಾಯಿಯ ಅಪಮೌಲ್ಯವನ್ನು ತಡೆಗಟ್ಟಲು ಸಾಧ್ಯ. ಇಂದು ಆಧುನಿಕತೆ ಬೆಳದಂತೆ ಪರಿಸರವು ಹಾಳಾಗುತ್ತಿರುವುದು ನೋವಿನ ಸಂಗತಿ. ಈ ಬಗ್ಗೆ ಸಾರ್ವಜನಿಕರು ಜಾಗೃತಿ ಹೊಂದಿ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳುವಂತೆ ಕೋರಿದರು.
ಉಪನ್ಯಾಸಕ ಜಿ.ಎಸ್. ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಧನ ಉಳಿತಾ ಸಪ್ತಾಹ ದಿನಾಚರಣೆಯ ಅಂಗವಾಗಿ 1 ವಾರಗಳ ಕಾಲ ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ 42 ಉಪನ್ಯಾಸಕರು ಹಲವಾರು ಸಿಬ್ಬಂದಿ ಹಾಗೂ 1150 ವಿದ್ಯಾರ್ಥಿಗಳು 1 ವಾರದವರೆಗೆ ಯಾವುದೇ ಸ್ವಂತ ವಾಹನ ಬಳಸದೇ ಪರಿಸರಕ್ಕೆ ಮತ್ತು ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಇಂಧನ ಉಳಿತಾಯ ಸಪ್ತಾಹದ ಪ್ರತಿಜ್ಞಾವಿಧಿ ಬೋಧಿಸಲಾಯಿತು.