ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜ.ಅನ್ನದಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Vishwanath S
Updated On : 22 Sept 2013, 12:11 pm

ಮುಂಡರಗಿ: ಸ್ಥಳೀಯ ಜ. ಅನ್ನದಾನ ವಿದ್ಯಾ ಪ್ರಸಾರಕ ಸಮಿತಿಯ ಜ.ಅನ್ನದಾನ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈಚೆಗೆ ಕಲಕೇರಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುಂಪು ಆಟದಲ್ಲಿ ಪುರುಷರ ಖೋಖೋ ಪ್ರಥಮ, 4್ಢ400 ಮತ್ತು 4್ಢ100 ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ಆಟಗಳಲ್ಲಿ ಎಲ್.ಎಸ್. ಮುರಡಿ (ಸರಪಳಿಗುಂಡು ಎಸೆತದಲ್ಲಿ ಪ್ರಥಮ), ಕೆ.ಎಸ್. ಕಾರಬಾರಿ (ಬಲ್ಲೆ ಎಸೆತದಲ್ಲಿ ಪ್ರಥಮ), ದುರಗಪ್ಪ ಸಿಂಟ್ರಿ (800 ಮೀ ಓಟದಲ್ಲಿ ದ್ವಿತೀಯ, 400 ಮೀ. ಓಟದಲ್ಲಿ ತೃತೀಯ), ಪಿ. ಪ್ರದೀಪ (5000 ಮೀ ಓಟದಲ್ಲಿ ತೃತೀಯ), ಎ.ಸಿ. ವಾಲಿಕಾರ (1500 ಮೀ ಓಟದಲ್ಲಿ ಪ್ರಥಮ), ಕೆ.ಎಚ್. ಮುಲ್ಲಾ (1500 ಮೀ ಓಟದಲ್ಲಿ ದ್ವಿತೀಯ), ಎಸ್.ಕೆ. ಮಾದರ (400 ಮೀ ಓಟದಲ್ಲಿ ಪ್ರಥಮ), ಆರ್.ಕೆ. ಪಾಟೀಲ (ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ), ವಿ.ಎಚ್. ಪೂಜಾರ (5000 ಮೀ ಓಟದಲ್ಲಿ ದ್ವಿತೀಯ, ಹ್ಯಾಮರ್ ಥ್ರೋನಲ್ಲಿ ದ್ವಿತೀಯ) ಸ್ಥಾನ ಪಡೆದಿದ್ದಾರೆ.
ಉತ್ತಮ ಶಿಕ್ಷಕ ಪ್ರಶಸ್ತಿ
ನರಗುಂದ: ಪಟ್ಟಣದ ಗಾಂಧಿ ಚೌಕ್‌ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ, ಪುಟ್ಟರಾಜ ಸೇವಾ ಸಮಿತಿ ನರಗುಂದ ಆಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳವರ ಪುಣ್ಯತಿಥಿ ಅಂಗವಾಗಿ ಉರ್ದು ಪ್ರಾಥಮಿಕ ಶಾಲೆ ನಂ. 1ರ ಶಿಕ್ಷಕಿ ಶಹನಾಜ ತಬಲಚಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅ. 1 ರಂದು ಸತ್ಯಾಗ್ರಹ
ಗದಗ: ಗದಗ-ಬೆಟಗೇರಿ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ಗೇಟ್‌ಗೆ ಸೇತುವೆ ರಸ್ತೆಯು ಕಳೆದ ಹಲವು  ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಹಾಗೂ ಸಂಬಂಧಿಸಿದವರಿಗೆ ಹಲವಾರು ಬಾರಿ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಾರಣ ಜಿಲ್ಲಾಡಳಿತವನ್ನು ಎಚ್ಚರಿಸಲು ಬೆಟಗೇರಿಯ ಕುರಹಟ್ಟಿಪೇಟೆ ಹಾಗೂ ಬೆಟಗೇರಿ ಭಾಗದ ಸಂಘಟನೆಗಳು, ಸಾರ್ವಜನಿಕರು ಅ. 1 ರಂದು ರಸ್ತೆ ದುರಸ್ತಿಗೆ ಆಗ್ರಹಿಸಿ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ದರಿಸಿದ್ದಾರೆ ಎಂದು ಮಹೇಶ ಕರಿಬಿಷ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಷ್ಣು ಜನ್ಮದಿನ
ಗಜೇಂದ್ರಗಡ: ಪಟ್ಟಣದಲ್ಲಿರುವ ಡಾ. ವಿಷ್ಣುಸೇನೆ ಅಭಿಮಾನಿ ಬಳಗ ವತಿಯಿಂದ ಈಚೆಗೆ ವಿಷ್ಣು ವೃತ್ತದಲ್ಲಿ ಅಭಿನಯ ಭಾರ್ಗವ, ಸಾಹಸ ಸಿಂಹ ಡಾ. ವಿಷ್ಣುವರ್ಧನರವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು.

ಟ್ರ್ಯಾಕ್ಟರ್ ಕಂದಕಕ್ಕೆ: ಇಬ್ಬರಿಗೆ ಗಾಯ
ಲಕ್ಷ್ಮೇಶ್ವರ: ಸಮೀಪದ ಹರದಗಟ್ಟಿ ಗ್ರಾಮದ ಬಳಿ ಟ್ರ್ಯಾಕ್ಟರೊಂದು ಕಂದಕಕ್ಕೆ ಬಿದ್ದು ಇಬ್ಬರು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ.
ಗಾಯಗೊಂಡವರನ್ನು ಅಮರಾಪುರ ಗ್ರಾಮದ ಹನುಮಂತಪ್ಪ ಭಂಡಾರಿ (50) ಟ್ರ್ಯಾಕ್ಟರ್ ಚಾಲಕ ಶಿವಶಂಕರಪ್ಪ ಗೊರವರ (25) ಎಂದು ಗುರುತಿಸಲಾಗಿದ್ದು, ಲಕ್ಷ್ಮೇಶ್ವರದಿಂದ ಅಮರಾಪುರಕ್ಕೆ ಹರದಗಟ್ಟಿ ಗ್ರಾಮದ ಮಾರ್ಗವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್ ಅಚಾನಕ್ ಆಗಿ ರಸ್ತೆಯ ಬದಿಯ ಕಂದಕಕ್ಕೆ ಜರುಗಿಕೊಂಡಿದೆ. ಈ ಸಂದರ್ಭ ಟ್ರ್ಯಾಕ್ಟರ್‌ನಲ್ಲಿದ್ದ ಹನುಮಂತಪ್ಪ ಭಂಡಾರಿ ಕಳಗೆ ಬಿದ್ದು ಗಾಯಗೊಂಡಿದ್ದಾನೆ.
ಟ್ರ್ಯಾಕ್ಟರ್ ಚಾಲಕ ಶಿವಶಂಕರಪ್ಪ ಗೊರವರ ಟ್ರ್ಯಾಕ್ಟರ್‌ನ ಚಕ್ರದ ಅಡಿ ಸಿಲುಕಿ ಗಾಯಗೊಂಡಿದ್ದು, ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಟ್ರ್ಯಾಕ್ಟರ್ ಅಡಿ ಸಿಲುಕಿದವರನ್ನು ಪ್ರಾಣಾಪಾಯದಿಂದ ಪಾರು ಮಾಡಿದರು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಯಿತು. ಲಕ್ಷ್ಮೇಶ್ವರ ಪಿಎಸ್‌ಐ ವಿಕಾಸ ಲಮಾಣಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಗ್ನಿಶಾಮಕ ಠಾಣೆ ಅಧಿಕಾರಿ ಟಿ. ಪರಶುರಾಮ್, ಸಿಬ್ಬಂದಿ ಎಲ್.ಎಫ್. ಪಾಟೀಲ, ಎಸ್.ಐ. ಡೊಳ್ಳಿ, ಎಫ್.ಡಿ. ಸಂಗಪ್ಪ, ಆರ್.ಬಿ. ಮುಂಡೆವಾಡಗಿ, ಎ.ಐ. ಕಲಾಯಿಗಾರ ಕಾರ್ಯಾಚರಣೆಯಲ್ಲಿದ್ದರು.
ಇಂದು ಪೈಕಾ ಕ್ರೀಡಾಕೂಟ
ಗದಗ:  ಜಿಲ್ಲಾಡಳಿತ ಗದಗ, ಜಿಪಂ ಗದಗ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪಂಚಾಯತ್ (ಯುವ ಕ್ರೀಡಾ ಔರ್ ಖೇಲ್ ಅಭಿಯಾನ) ದಸರಾ, ಪೈಕಾ ಮಹಿಳಾ ಮತ್ತು ಪೈಕಾ ಗ್ರಾಮೀಣ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭವು ಸೆ. 22ರ ಬೆಳಗ್ಗೆ 11ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
 ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು.
 ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಪಾಟೀಲ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡ್ರ, ಶಾಸಕ ಬಿ.ಆರ್.ಯಾವಗಲ್, ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಹನುಮಪ್ಪ ಇಂಗಳಹಳ್ಳಿ, ಉಪಾಧ್ಯಕ್ಷೆ ಪ್ರತಿಭಾ ಶಿದ್ರಾಮಣ್ಣವರ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಜಿಪಂ ಸಿಇಓ ವೀರಣ್ಣ ತುರಮರಿ ಉಪಸ್ಥಿತರಿರುವರು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಕಟಣೆಯಲ್ಲಿತಿಳಿಸಿದೆ.
ಮಳೆಗೆ ಕುಸಿದ ದೇವಸ್ಥಾನದ ಗೋಡೆ
ನರೇಗಲ್ಲ: ಪಟ್ಟಣದ ಹೃದಯ ಭಾಗದಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ಗೋಡೆ ಈಚೆಗೆ ಸುರಿದ ಮಳೆಯಿಂದಾಗಿ ಕುಸಿದು ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ಪಪಂ ಸಿಬ್ಬಂದಿಯವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಿದ್ದ ಗೋಡೆಯ ಮಣ್ಣು, ಕಲ್ಲುಗಳನ್ನು ಎತ್ತಿ ಹಾಕಿ ರಸ್ತೆ ಸಂಚಾರಕ್ಕೆ ತೆರವು ಮಾಡಿದರು. ಅತಿ ಪುರಾತನಾದ ಈ ದೇವಸ್ಥಾನವು ಸರ್ಕಾರದಿಂದ ಸಂರಕ್ಷಿತ ದೇವಸ್ಥಾನವಾಗಿದ್ದು ಪುರಾತತ್ವ ಇಲಾಖೆಯವರು ಈ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಜನತೆಗೆ ಉಳಿಸಿಕೊಡಬೇಕೆಂದು ಕೃಷ್ಣ ಗ್ರಾಮಪುರೋಹಿತ, ರಘುನಾಥ ಕೊಂಡಿ ಅಗ್ರಹಿಸಿದ್ದಾರೆ. ರೋಣ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳೂ ಸಹ ದೇವಸ್ಥಾನಕ್ಕೆ ಭೇಟಿ ನೀಡಿ ಜೀರ್ಣೋದ್ಧಾರಕ್ಕೆ ಸಹಕರಿಸಬೇಕೆಂದು ವಿನಂತಿಸಿದ್ದಾರೆ.
ಆಕ್ರೋಶಗೊಂಡ ಸಾರ್ವಜನಿಕರಿಂದ ಬಸ್‌ಗೆ ಕಲ್ಲು ಎಸೆದು ಪ್ರತಿಭಟನೆ
ಗದಗ: ಆಟವಾಡುತ್ತಿದ್ದ ಬಾಲಕನ ಮೇಲೆ ಶಾಲಾ ಬಸ್ ಹಾಯ್ದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆಕ್ರೋಶಗೊಂಡ ಸಾರ್ವಜನಿಕರು ಬಸ್‌ಗೆ ಕಲ್ಲು ಎಸೆದು ಪ್ರತಿಭಟನೆ ಜರುಗಿಸಿದ ಘಟನೆ ಶನಿವಾರ ಸಂಜೆ ಸ್ಥಳೀಯ ಶಹಪುರ ಪೇಟೆ ಬಡಾವಣೆಯಲ್ಲಿ ಜರುಗಿದೆ. ನಗರದ ಬಿಫಿನ್ ಚಿಕ್ಕಟ್ಟಿ ಪದವಿ ಕಾಲೇಜಿಗೆ ಸೇರಿದ ಬಸ್ ಮನೆಯ ಮುಂಭಾಗದಲ್ಲಿನ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಸಂದರ್ಭ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಗೋಪಾಲ ಭಜಂತ್ರಿ (3) ಮಗುವಿನ ಮೇಲೆ ಹಾಯ್ದಿದ್ದು, ಸ್ಥಳದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ. ಬಸ್‌ನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಬಸ್‌ನ ಮೇಲೆ ಕಲ್ಲು ತೂರಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಘಟನೆ ಅರಿತ ಗದಗ ಶಹರ ಪೊಲೀಸ್ ಠಾಣೆಯ ಸಿಪಿಐ ಸಂತೋಷ ಪವಾರ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದಿ ಕಲಿಯಲು ಆಸಕ್ತಿ ಇರಬೇಕು
ಗಜೇಂದ್ರಗಡ: ಹಿಂದಿ ರಾಷ್ಟ್ರ ಭಾಷೆಯಾಗಿದ್ದು, ಜತೆಗೆ ಸರಳ ಸುಂದರ ಭಾವೈಕ್ಯತಾ ಭಾಷೆಯಾಗಿದೆ. ಈ ನಿಟ್ಟಿನಲ್ಲಿ ಸರ್ವರೂ ಹಿಂದಿ ಭಾಷೆ ಕಲಿಯುವ ಆಸಕ್ತಿ ಹೊಂದಬೇಕು ಎಂದು ಮುಖ್ಯ ಶಿಕ್ಷಕಿ ಎಂ.ಟಿ. ಕುಲಕರ್ಣಿ ಹೇಳಿದರು. ಅವರು ಈಚೆಗೆ ಸ್ಥಳೀಯ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢಶಾಲೆಯಲ್ಲಿ ಹಿಂದಿ ವಿಭಾಗದ ವತಿಯಿಂದ ನಡೆದ ಹಿಂದಿ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಭಾಷೆಗೆ ಸಾಂಸ್ಕೃತಿಕ ಇತಿಹಾಸವಿದ್ದು, ದೇಶ ವಿದೇಶಗಳ ಬಾಂಧವ್ಯ ಬೆಸೆಯುವ ಸಂಪರ್ಕ ಭಾಷೆಯಾಗಿದೆ. ಸರ್ಕಾರ ಹಿಂದಿ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿದ್ದು, ವಿದ್ಯಾರ್ಥಿಗಳು ಹಿಂದಿ ಭಾಷೆಯ ಕಲಿಕೆ ಮತ್ತು ಬರವಣಿಗೆಯನ್ನು ರೂಢಿಸಿಕೊಂಡು ರಾಷ್ಟ್ರ ಭಾಷೆಯ ಅಭಿಮಾನ ಇಮ್ಮಡಿಗೊಳಿಸುವಲ್ಲಿ ಮುಂದಾಗಿ ಎಂದರು. ಪ್ರಾಚಾರ್ಯ ಎಸ್.ಎನ್. ಶಿವರೆಡ್ಡಿ ಹಿಂದಿ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಹಿಂದಿ ಭಾಷಾ ಕುರಿತು ನಡೆಸಿದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಎನ್.ಐ. ಹಾಶೀಮನವರ ಪ್ರಥಮ, ಡಿ.ಎ. ತಹಸೀಲ್ದಾರ್ ದ್ವಿತೀಯ ಹಾಗೂ ಆರ್.ಎರ್. ಹುನಗುಂದ ತೃತೀಯ ಸ್ಥಾನ ಪಡೆದರು. ಕೆ.ಬಿ. ಚಾಗರಿ, ಎಂ.ವಿ.ನಾಡಗೇರ, ಐ.ಎಸ್. ಹಾಶೀಮನವರ, ಎಸ್.ಎಸ್. ನರೇಗಲ್, ಎನ್.ಎನ್. ವಾಲಿಕಾರ, ಎಂ. ಲಕ್ಷ್ಮೀದೇವಿ, ಎಸ್.ಸಿ. ಹೂಗಾರ, ವಿ.ವೈ. ಸುಣಗಾರ, ಸಿ.ಎಸ್. ಹಿರೇಮಠ, ಆರ್.ಎಸ್. ರಾಠೋಡ ಉಪಸ್ಥಿತರಿದ್ದರು.
ರಾಜಕೀಯ ಸಮಾವೇಶ
ಗದಗ:  ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಿ ಪರ್ಯಾಯ ಧೋರಣೆಗಳಿಗೆ ಆಗ್ರಹಿಸಿ ಎಡಪಕ್ಷಗಳ ರಾಜಕೀಯ ಸಮಾವೇಶ ಸೆ. 22ರಂದು ಬೆಳಗ್ಗೆ 11.30 ಗಂಟೆಗೆ ನಗರದ ಅಕ್ಕನ ಬಳಗ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಉದ್ಘಾಟನೆಯನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ನಿತ್ಯಾನಂದ ಸ್ವಾಮಿ ನೆರವೇರಿಸುವರು ಎಂದು ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ, ಮಹೇಶ ಹಿರೇಮಠ, ಮಹಾಗುಂಡಪ್ಪ ಅಂಗಡಿ, ಬಸವರಾಜ ಮಂತೂರ, ವಿಠ್ಠಲ ನಾಯಕ, ಪೀರು ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟ್ಟಿಮನಿ ಪ್ರಥಮ
ನರಗುಂದ: ತಾಲೂಕಿನ ರಡ್ಡೇರ-ನಾಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣೇಶ ಚತುರ್ಥಿ ನಿಮಿತ್ತವಾಗಿ ಹಮ್ಮಿಕೊಳ್ಳಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಸವರಾಜ ಕಟ್ಟಿಮನಿ ಹಾಗೂ ಸಂಗಡಿಗರು ಪ್ರಥಮ, ಲಕ್ಷ್ಮೀಬಾಯಿ ಚಿತ್ತರಗಿ ಹಾಗೂ ಸಂಗಡಿಗರು ದ್ವಿತೀಯ, ರಂಗೋಲಿ ಸ್ಪರ್ಧೆಯಲ್ಲಿ ಅಕ್ಷತಾ ಹೂಲಿ ಪ್ರಥಮ, ಶಂಕ್ರಮ್ಮ ಮಡಿವಾಳರ ದ್ವಿತೀಯ, ಯಲ್ಲವ್ವ ಮಮಟಿ ತೃತೀಯ, ಹಿಟ್ಟಿನಿಂದ ನಾಣ್ಯ ತೆಗೆಯುವ ಸ್ಪರ್ಧೆಯಲ್ಲಿ ವಿನಾಯಕ ಚಲವಾದಿ ಹಾಗೂ ಐಶ್ವರ್ಯ ಕೆಳಗೇರಿ ಪ್ರಥಮ, ಆದರ್ಶ ಹೂಲಿ ಮತ್ತು ಈರಣ್ಣ ಕಟಂಬ್ಲಿ ದ್ವಿತೀಯ ಸ್ಥಾನ ಪಡೆದರು. ಈ ಸಂದರ್ಭದಲ್ಲಿ ಪ್ರಧಾನಗುರು ಎಸ್.ಎಸ್. ಮರೋಳ, ಜಿ.ಬಿ.ಪೂಜಾರ, ಎಂ.ಬಿ. ಯಂಡಿಗೇರಿ, ವಿ.ಬಿ. ಹಿರೇಮಠ, ಎನ್.ವಿ. ಗುಡಗಾಪುರ, ಸುರೇಶ ಬನ್ನಿಗಿಡದ, ಇರ್ಶಾದ ಅಹ್ಮದ ಮುಂತಾದವರು ಉಪಸ್ಥಿತರಿದ್ದರು.
ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯ: ಯಾವಗಲ್
ನರಗುಂದ:  ಪ್ರತಿಯೊಬ್ಬ ವ್ಯಕ್ತಿಗೆ ಇಂದಿನ ಆಧುನಿಕ ಯುಗದಲ್ಲಿ ಯೋಗ ಬಹಳ ಅವಶ್ಯ ಎಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು.  ಅವರು ಈಚೆಗೆ ತಾಲೂಕಿನ ಶಿರೋಳ ಗ್ರಾಮದ ಅಮರೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಸ್‌ಎಚ್‌ಪಿಎಂಎಸ್ ಯೋಗ ಪಾಠ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯೋಗ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೆಮ್ಮದಿಯ ಬದುಕು, ಉತ್ತಮ ಆರೋಗ್ಯ ಯೋಗದಿಂದ ಸಿಗಲು ಸಾಧ್ಯವಿದ್ದು, ಪ್ರತಿಯೊಬ್ಬರೂ ಯೋಗ ತರಬೇತಿ ಪಡೆದುಕೊಳ್ಳಲು ಮುಂದಾಗಬೇಕು ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಜ. ಬಸವರಾಜ ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಮಂಜುಳಾ ಯಲವಿಗಿಮಠ, ಮಲ್ಲಿಕಾರ್ಜುನ ಕೋಡಬಳಿ, ಸಂಗಮೇಶ ಸಂತಮ್ಮನ್ನವರ ತರಬೇತದಾರ ರುದ್ರಪ್ಪ ಕೊಣ್ಣೂರ ಅವರನ್ನು ಸನ್ಮಾನಿಸಲಾಯಿತು. ಕೆ.ಎಸ್. ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಎನ್.ಎಚ್. ಜಾಧವ ನಿರೂಪಿಸಿದರು.
ಡಾ. ಪುಟ್ಟರಾಜ ಶ್ರೀಗಳ ಕೊಡುಗೆ ಅಮೋಘ
ಗದಗ: ಲಿಂಗೈಕ್ಯ ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳರವರು ನಾಟಕ, ಸಂಗೀತ ಹಾಗೂ ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಮೋಘವಾಗಿದ್ದು, ಅವರ ಸಾಧನೆ ಈ ನಾಡಿಗೆ ಸ್ಮರಣೀಯ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಮುರ್ಖಂಡಿ ಹೇಳಿದರು. ಅವರು ಈಚೆಗೆ ನಗರದ ಸ್ಪಂದನ ವಿವಿದೋದ್ದೇಶಗಳ ಚಾರಿಟೇಬಲ್ ಸೇವಾ ಟ್ರಸ್ಟ್ ಕಮಿಟಿಯಲ್ಲಿ ಲಿಂ. ಡಾ. ಪುಟ್ಟರಾಜ ಕವಿಗವಾಯಿಗಳರವರ ತೃತೀಯ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಲಿಂ. ಪುಟ್ಟರಾಜ ಕವಿ ಗವಾಯಿಗಳು ಅಂಧ, ಅನಾಥ ಮಕ್ಕಳ ಆಶಾಕಿರಣವಾಗಿ ಅವರ ಬಾಳಿಗೆ ಬೆಳಕಾಗಿ ಹೊರಹೊಮ್ಮಿದ ಮಹಾನ್ ಶರಣರಾಗಿದ್ದು, ಅವರ ಆದರ್ಶಗಳು ಇಂದಿನ ಯುವಕರಿಗೆ ದಾರಿದೀಪವಾಗಲಿ ಎಂದರು. ಇದೇ ಸಂದರ್ಭ ಸ್ಪಂದನಾ ವಿವಿಧೋದ್ದೇಶಗಳ ಚಾರಿಟೇಬಲ್ ಸೇವಾ ಟ್ರಸ್ಟ್ ಕಮಿಟಿ ರಚಿಸಲಾಯಿತು. ಅಧ್ಯಕ್ಷರಾಗಿ ಬಸವರಾಜ ಮುರ್ಖಂಡಿ ಅವರನ್ನು ಆಯ್ಕೆಗೊಳಿಸಿದರು. ಈ ಸಂದರ್ಭ ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ವೇದಿಕೆಯ ರಾಜ್ಯ ಜಂಟಿಕಾರ್ಯದರ್ಶಿ ಕೃಷ್ಣಾ ಹಡಪದ ಪ್ರಾಸ್ತಾವಿಕ ಮಾತನಾಡಿದರು.  ಈ ಸಂದರ್ಭ ಬಸವರಾಜ ಬಹದ್ದೂರಬಂಡಿ, ಪ್ರಶಾಂತ ಕಲ್ಮನಿ, ಮಹಮ್ಮದಅಲಿ ಬಳ್ಳಾರಿ, ಮಂಜುನಾಥ ಪೂಜಾರ, ರಾಘವೇಂದ್ರ ರೋಣದ, ವಿಶಾಲಕ್ಷೀ ಮುರ್ಖಂಡಿ, ಶಾಂತವ್ವ ಮುರ್ಖಂಡಿ, ಶಿವಾನಂದ ಶಿವಸಿಂಪಗೇರ, ಇಮ್ತಿಯಾಜ ಗೋರಿ, ನಾರಾಯಣ ಉಡುಪಿ, ಸಂತೋಷ ಪವನ, ಈರಪ್ಪ ಎಸ್.ಎಂ, ಸಿದ್ದು ಐ.ಎಂ, ಶ್ರೀಕಾಂತ ದಂಡಿನ, ನಾಗರಾಜ ಕಲ್ಮನಿ, ಚನ್ನಪ್ಪ ಹರ್ತಿ, ಶಂಕ್ರಪ್ಪ ಮೂರಶಿಳ್ಳಿನ ಮುಂತಾದವರಿದ್ದರು. ಮಹೇಶ ಬಹದ್ದೂರಬಂಡಿ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.
ಸಮರ್ಪಕವಾಗಿ ಸಾಲವಿತರಿಸಲು ಮನವಿ
ಗದಗ: ಜಿಲ್ಲೆಯ ಬಡ ಅಲ್ಪಸಂಖ್ಯಾತರ ಜನರಿಗೆ ಸಮರ್ಪಕ ಸಾಲದ ಯೋಜನೆಗಳನ್ನು ವಿತರಿಸಬೇಕು ಮತ್ತು ನಿಗಮದಲ್ಲಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಸರಿಯಾದ ಮಾಹಿತಿ ನೀಡಬೇಕೆಂದು ಆಗ್ರಹಿಸಿ ಈಚೆಗೆ ಗದಗ ಜಿಲ್ಲಾ ಯುವ ಅಲ್ಪಸಂಖ್ಯಾತರ ಸೇವಾ ಸಂಘದ ಪದಾಧಿಕಾರಿಗಳು ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವ್ಯವಸ್ಥಾಪಕರಿಗೆ ಮನವಿ ನೀಡಿ ಆಗ್ರಹಿಸಿದರು.  ತಮ್ಮ ಅಧಿಕಾರ ಅವಧಿಯಲ್ಲಿ ನಿಗಮದಿಂದ ಸಿಗುವ ವಿವಿಧ ಯೋಜನೆಗಳ ಮಾಹಿತಿ ಮಾರ್ಗದರ್ಶನ ಅಲ್ಪಸಂಖ್ಯಾತರ ಜನರಿಗೆ ಸರಿಯಾಗಿ ಸಿಗಬೇಕು, ನಿಗಮದಿಂದ ನೀಡುವ ಸಾಲದ ಯೋಜನೆಗಳ ವಿತರಣೆಯಲ್ಲಿ ಏಜೆಂಟರಿಗೆ ಅವಕಾಶ ನೀಡದೆ ಅರ್ಜಿದಾರರು ನೇರವಾಗಿ ನಿಗಮದಲ್ಲಿ ಅರ್ಜಿ ಸಲ್ಲಿಸುವ ಕಾರ್ಯವಾಗಬೇಕು, ಈ ಹಿಂದೆ ನಿಗಮದಲ್ಲಿ ನಡೆಯುತ್ತಿದ್ದ ಅವ್ಯವಹಾರ ಮತ್ತು ಏಜೆಂಟರ ಹಾವಳಿ ಖಂಡಿಸಿ ಸಮಿತಿಯಿಂದ ಹೋರಾಟಗಳನ್ನು ನಡೆಸಲಾಗಿದ್ದು ಇಂತಹ ಅವಕಾಶ ನೀಡಬಾರದೆಂದು ಮನವಿಯಲ್ಲಿ ತಿಳಿಸಲಾಗಿದೆ. ಇಮ್ತಿಯಾಜ ಮಾನ್ವಿ, ಮಹ್ಮದರಫೀಕ್ ಶೇಖ್, ಅಬುಬಕ್ಕರ ಮಕಾಂದಾರ, ಶರೀಫ ಬಿಳೆಯಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement