ವೈದ್ಯ ವೃತ್ತಿ ಅತ್ಯಂತ ಶ್ರೇಷ್ಠ: ಶಾಸಕ ಜಿ.ಎಸ್. ಪಾಟೀಲ
ರೋಣ: ವೈದ್ಯರು ಸಾಕ್ಷಾತ್ ನಾರಾಯಣ ಹರಿ ಎಂಬಂತೆ ರೋಗಿಗಳ ಪಾಲಿಗೆ ಆಪದ್ಬಾಂಧವರಾಗಿ ಸಮಾಜದಲ್ಲಿ ಉತ್ತಮವಾದ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ವೈದ್ಯರನ್ನು ಪ್ರೀತಿ, ವಿಶ್ವಾಸ, ಗೌರವದಿಂದ ಕಾಣಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಈಚೆಗೆ ಪಟ್ಟಣದಲ್ಲಿ ಐಎಂಎ, ಸಿಜಿಪಿ, ಕೆ.ಎಸ್.ಎಫ್. ಮತ್ತು ಭಾರತೀಯ ವೈದ್ಯಕೀಯ ಸಂಘ ತಾಲೂಕು ಘಟಕ ವತಿಯಿಂದ ಜರುಗಿದ ತಾಲೂಕು ವೈದ್ಯಕೀಯ ಸಂಘದ ಭವನದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಇಂದು ವಿವಿಧ ವಿಸ್ಮಯಕಾರಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ರೋಗಗಳ ಪತ್ತೆ ಮತ್ತು ಉಪಶಮನಕ್ಕೆ ನಿರಂತರ ಸಂಶೋಧನೆಗಳು ನಡೆಯುತ್ತಲಿವೆ. ವೈದ್ಯ ವೃತ್ತಿ ಎಂಬುದು ನಿರಂತರ ಕಲಿಕೆಯಾಗಿದ್ದು, ಹೊಸ ಹೊಸ ಆವಿಷ್ಕಾರಗಳ ಕುರಿತು ವೈದ್ಯರು ತಿಳಿಯುವುದು ಅತ್ಯಗತ್ಯವಾಗಿದೆ. ವೈದ್ಯಕೀಯ ಉಪನ್ಯಾಸ ಸೇರಿದಂತೆ ವಿವಿಧ ವೈದ್ಯಕೀಯ ಚಟುವಟಿಕೆಗಳು ನಡೆಯಲು ಒಂದು ವ್ಯವಸ್ಥಿತ ಭವನದ ಅಗತ್ಯವಿತ್ತು. ಅದಕ್ಕಾಗಿ ರೋಣ ಪಟ್ಟಣದಲ್ಲಿ ವ್ಯವಸ್ಥಿತವಾದ ಭವನವನ್ನು ತಾಲೂಕು ವೈದ್ಯಕೀಯ ಸಂಘ ನಿರ್ಮಿಸಿದ್ದು ಉತ್ತಮ ಕಾರ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಬಿ. ಲಕ್ಕೊಳ ಮಾತನಾಡಿ, ವೈದ್ಯಕೀಯ ಚಟುವಟಿಕೆಗಳು ಜರುಗಲು ವೈದ್ಯರಿಗೆ ಅನೂಕೂಲ ಕಲ್ಪಿಸುವ ದಿಸೆಯಲ್ಲಿ ಜನಪ್ರತಿನಿಧಿಗಳ ನಿಧಿ ಹಾಗೂ ವಿವಿಧ ಸಂಪನ್ಮೂಲಗಳಿಂದ ಕ್ರೋಡೀಕರಣವಾದ ಹಣದಿಂದ ಪಟ್ಟಣದಲ್ಲಿ ವೈದ್ಯ ಭವನ ನಿರ್ಮಿಸಲು ಸಾಧ್ಯವಾಯಿತು. ಭವನ ನಿರ್ಮಾಣಕ್ಕೆ ಸಹಾಯ ಮಾಡಿದ ಎಲ್ಲರಿಗೂ ಅಭಿನಂದನೆಗಳು ಎಂದರು. ಸಮಾರಂಭದ ಬಳಿಕ ಡಾ. ಶರಣು ಆಲೂರ, ಡಿಎಚ್ಓ ಡಾ. ಡಿ.ಬಿ.ಚೆನಶೆಟ್ಟಿ, ಡಾ. ಗಣೇಶರಾವ್, ಡಾ. ಸಿದ್ದಪ್ಪ ಎಚ್. ಮತ್ತು ಡಾ. ಅನಿತಾ ಧರಣಾ ಇವರಿಂದ ವೈಜ್ಞಾನಿಕ ವಿಚಾರಗೋಷ್ಠಿ ಜರುಗಿತು. ಜಿಲ್ಲಾ ವೈದ್ಯಾಧಿಕಾರಿ ಡಾ. ಬಿ.ಡಿ. ಚೆನಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಅಭಿಯಂತರ ಮಂಡಸೊಪ್ಪಿ, ಡಾ. ಮಲ್ಲಾಪುರ, ಎಲ್.ಆರ್. ರಡ್ಡೇರ, ಕೆ.ಬಿ. ಧನ್ನೂರ, ಜಿ.ಕೆ. ಕಾಳೆ, ಎಸ್.ಬಿ. ಹಿರೇಗೌಡ್ರ, ಎಸ್.ಎ. ನೀರಲಗಿ, ಕೃಷ್ಣಾ ಕಾಳೆ, ಸ್ವಪ್ನಾ ಕಾಳೆ ಇದ್ದರು.