ಸುಶಿಕ್ಷಿತರಾದಲ್ಲಿ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ಗದಗ, ಸೆ. 21
ಇಂದಿನ ಆಧುನಿಕ ಸುಮಾಜದಲ್ಲಿ ಮನುಷ್ಯನು ಸುಶಿಕ್ಷಿತನಾಗಿ ದೇಶದ ಅಭಿವೃದ್ಧಿಗೆ ಬೇಕಾದ ಪೂರಕ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಶಕ್ತಿ ಹೊಂದಿದಲ್ಲಿ ಈ ಜಗತ್ತು ಅಭಿವೃದ್ಧಿ ಹೊಂದಲು ಸಹಕಾರಿ ಎಂದು ಡಾ. ರಾಜಶೇಖರ ದಾನರಡ್ಡಿ ಹೇಳಿದರು.
ಅವರು ಈಚೆಗೆ ನಗರದ ಹಾಲಕೇರಿ ಆನಂದಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ 102ನೇ ಶಿವಾನುಭವ ಸಂಪದ ಹಾಗೂ ಅಭಿನವ ಅನ್ನದಾನ ಶ್ರೀಗಳಿಗೆ ಹಮ್ಮಿಕೊಳ್ಳಲಾಗಿದ್ದ ತುಲಾಭಾರ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಕೂಡಿಬಾಳಿದರೆ ಸುಖ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಮರಸವೇ ಜೀವನ, ಸಾಮರಸ್ಯವೇ ಬದುಕು ನಮ್ಮನ್ನು ಒಂದುಗೂಡಿಸುತ್ತದೆ. ಈ ಕೌಟುಂಬಿಕ ಒಕ್ಕಟ್ಟಿನ ವ್ಯವಸ್ಥೆ ರಾಮಾಯಣ ಹಾಗೂ ಮಹಾಭಾರತದಲ್ಲಿತ್ತು. ನಮ್ಮ ಪರಿಸರದಲ್ಲಿನ ಜನರ ಬದುಕನ್ನು ಅರ್ಥೈಸಿಕೊಂಡು ಅವರೊಂದಿಗೆ ಒಂದುಗೂಡಿಕೊಂಡು ಬಾಳಿದಾಗ ಮಾತ್ರ ಜೀವನ ಸುಖ, ಸುಂದರವಾಗಿ ಸಾಗಲು ಸಾಧ್ಯ. ಕಾರಣ ಪ್ರತಿಯೊಬ್ಬರೂ ತಮ್ಮ ತಮ್ಮಲ್ಲಿರುವ ಹಿಂಸಾ ಭಾವನೆಯನ್ನು ಕೈಬಿಟ್ಟು ಪರಸ್ಪರ ಪ್ರೀತಿ, ವಿಶ್ವಾಸ ಭಾವನೆಯನ್ನು ತಾಳುವುದು ಅತ್ಯವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಿಡಗುಂದಿಯ ಶಾಖಾಶಿವಯೋಗ ಮಂದಿರದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿ, ಗುರುವಿನ ತುಲಾಭಾರ ಗುರುವಿನ ಋಣ ತೀರಿಸುವುದು, ಅಭಿನಂದಿಸುವುದು. ಆ ಹಣವನ್ನು ಪ್ರತಿಭಾನ್ವಿತ ಬಡವಿದ್ಯಾರ್ಥಿಗಳ ಸಹಾಯಕ್ಕೆ ಉಪಯೋಗಿಸುವ ಕಾರ್ಯ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀಮಠದ ಕಾರ್ಯ ಶ್ಲಾಘನೀಯ ಎಂದರು.
ತುಲಾಭಾರ ಸ್ವೀಕರಿಸಿದ ಹಾಲಕೇರಿ ಆನಂದಾಶ್ರಮದ ಅಭಿನವ ಅನ್ನದಾನ ಶ್ರೀಗಳು ಮಾತನಾಡಿ, ಇಂದು ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವುದು ನೋವಿನ ಸಂಗತಿಯಾಗಿದೆ. ಕಾರಣ ಯುವಕರು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವತ್ತ ಗಮನ ಹರಿಸಬೇಕಿದೆ. ಅದಕ್ಕಾಗಿ ಬಂಗಾರದ ಮೋಹವನ್ನು ಕೈಬಿಡಬೇಕು. ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕು. ಅವುಗಳನ್ನು ಹೊರದೇಶಗಳಿಗೆ ಕಳಿಸುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಎಸ್.ಪಿ. ಸಂಶಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಎಫ್. ಚೇಗರಡ್ಡಿ, ಕೊಟ್ರಪ್ಪ ರೋಣದ, ತೋಟಪ್ಪ ಉಪ್ಪಿನ, ವೀರಪ್ಪ ಉಪ್ಪಿನ, ಗೌರಮ್ಮ ಉಪ್ಪಿನ, ವಿ.ಆರ್. ಕೋಟಿಗೌಡ್ರ ಮುಂತಾದವರು ಇದ್ದರು. ವನಮಾಲಾ ಮಾನಶೆಟ್ಟಿ ಪ್ರಾರ್ಥಿಸಿದರು. ಸಂಜಯ ತೆಂಬದಮನಿ ಸ್ವಾಗತಿಸಿದರು. ಪ್ರೊ. ಎಸ್.ಎಚ್. ದೇಶಪ್ಪನವರ ನಿರೂಪಿಸಿದರು.