ಟ್ರಾಫಿಕ್ ಸಿಗ್ನಲ್ ಉದ್ಘಾಟನೆ ಯಾವಾಗ?
ಗಜೇಂದ್ರಗಡ: ಜಿಲ್ಲೆಯ ಗಜೇಂದ್ರಗಡದಲ್ಲಿ ಜನದಟ್ಟಣೆ, ಜತೆ ಎಲ್ಲೆಂದರಲ್ಲಿ ನಿಂತ ವಾಹನಗಳು ಜನ ಸಾಮಾನ್ಯರ ಸಂಚಾರಕ್ಕೆ ತೀವ್ರ ತೊಂದರೆಯಾಗಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದವು. ಸುಗಮ ಸಂಚಾರಕ್ಕಾಗಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಇದೀಗ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಆದರೆ, ಉದ್ಘಾಟನೆ ಭಾಗ್ಯಕ್ಕೆ ವಿಳಂಬವಾಗಿದೆ.
ದೊಡ್ಡ ನಗರ, ನಗರ ಪಾಲಿಕೆ, ಮಹಾನಗರ ವ್ಯಾಪ್ತಿಯಲ್ಲಿ ಕಾಣುತ್ತಿದ್ದ ಟ್ರಾಫಿಕ್ ಸಿಗ್ನಲ್ ದೀಪಗಳನ್ನು ಗಜೇಂದ್ರಗಡದಲ್ಲಿ ಅಳವಡಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಶರವೇಗದಲ್ಲಿ ಬೆಳೆಯುತ್ತಿರುವ ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಪಟ್ಟಣದಲ್ಲಿ ಜನಸಂಖ್ಯೆ ಬೆಳದಂತೆ ಸಾರಿಗೆ ಬಸ್ ಸೌಕರ್ಯದ ಕೊರತೆ ಇದೆ. ಹೀಗಾಗಿ ಖಾಸಗಿ ವಾಹನಗಳ ದಟ್ಟಣೆ ಮಿತಿಮೀರಿದೆ. ಸಂಚಾರಿ ನಿಯಮ ಗಾಳಿಗೆ ತೂರಿದ ಪರಿಣಾಮ ಹದಗೆಟ್ಟ ಸಂಚಾರಿ ವ್ಯವಸ್ಥೆ ಅಧೋಗತಿಯತ್ತ ಸಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಾಲಕಾಲೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಮುಂದಾಗಿದೆ.
ಟ್ರಾಫಿಕ್ ಸಮಸ್ಯೆಗೆ ಪರಿಹಾರ: ಕಾಲಕಾಲೇಶ್ವರ ವೃತ್ತದಲ್ಲಿ ನಾಲ್ಕು ಲೋಹದ ಕುದರೆಗಳ ಪ್ರತಿಮೆ ಸ್ಥಾಪಿಸಿರುವುದು. ಎದುರು-ಬದುರು ಸಂಚರಿಸುವ ವಾಹನ ಸವಾರರಿಗೆ ಕೊಂಚ ಅಪಘಾತಕ್ಕೆ ಎಡೆ ಮಾಡಿಕೊಡಲಿದೆ. ಕುದುರೆಗಳನ್ನು ವೃತ್ತದ ತಳ ಭಾಗದಿಂದ 18 ಅಡಿ ಎತ್ತರದಲ್ಲಿ ನಿರ್ಮಿಸಿರುವುದು ಅವೈಜ್ಞಾನಿಕವಾಗಿದೆ. ಇದು ಸಂಚಾರಕ್ಕೆ ಅಡೆತಡೆ ಉಂಟು ಮಾಡಲಿದೆ ಎಂಬುದು ಸಾರ್ವಜನಿಕರ ದೂರು. ಆದರೆ, ಟ್ರಾಫಿಕ್ ಸಿಗ್ನಲ್ ಅಳವಡಿಕೆಯಿಂದ ಈ ಸಮಸ್ಯೆ ದೂರಾಗಲಿದೆ ಎನ್ನುವುದು ತಜ್ಞರ ಅಭಿಮತ.
ಸಿಸಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ: ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಪೊಲೀಸ್ ಇಲಾಖೆ ಅಳವಡಿಕೆಯ ಟ್ರಾಫಿಕ್ ಸಿಗ್ನಲ್ ಜತೆ ಸಿಸಿ ಕ್ಯಾಮೆರಾ ಅಳವಡಿಸಲು ಪುರಸಭೆಗೆ ಹಣಕಾಸಿನ ನೆರವು ನೀಡಲು ಪೊಲೀಸ್ ಇಲಾಖೆ ವಿನಂತಿಸಿದೆ. ಬೇಡಿಕೆ ಈಡೇರಿಸಲು ಪುರಸಭೆ ಮುಂದಾಗಬೇಕೆಂದು ಜನತೆ ಆಗ್ರಹಿಸಿದ್ದಾರೆ. ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಅಪರಾಧ ಪತ್ತೆ ಹಚ್ಚಲು ಹೆಚ್ಚಿನ ಅನುಕೂಲವಾಗುವುದು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಗದಗ ನಗರ ಹೊರತುಪಡಿಸಿ ಗಜೇಂದ್ರಗಡದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಚಾಲನೆ ನೀಡಿರುವುದು ಜಿಲ್ಲೆಯಲ್ಲಿಯೇ ಮೊದಲನೆಯದಾಗಿದೆ. ಹಿಂದಿನ ಸರ್ಕಾರ ಗಜೇಂದ್ರಗಡ ತಾಲೂಕು ಕೇಂದ್ರ ಘೋಷಣೆ ಮಾಡಿದಾಗ ಈ ಯೋಜನೆಗೆ ರೂಪಿಸಲಾಗಿದೆ. ಪಟ್ಟಣದಲ್ಲಿ ಜನಸಂದಣಿ ಮತ್ತು ವಾಹನ ದಟ್ಟಣೆಯಿಂದ ಹೆಚ್ಚುತ್ತಿದ್ದು, ಅಪಘಾತ ತಪ್ಪಿಸುವುದು ಮತ್ತು ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಅಗತ್ಯತೆ ಹಿನ್ನೆಲೆಯಿಂದ ಈ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ.
-ಡಾ. ಎಸ್.ಡಿ. ಶರಣಪ್ಪ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ಗೆ ಸಿಸಿ ಕ್ಯಾಮೆರಾ ಅಳವಡಿಸಲು ರೋಣ ಸಿಪಿಐ ಅವರು ಮಾತನಾಡಿದ್ದಾರೆ ಹೊರತು ನಾವು ಕೇಳಿದ ಲಿಖಿತ ಮನವಿ ನೀಡಿಲ್ಲ. ದಾಖಲೆ ಸಮೇತ ಕೋರಿದರೆ ಆಡಳಿತಾಧಿಕಾರಿಗೆ ತಿಳಿಸಿ ಸಿಸಿ ಕ್ಯಾಮರಾ ಅಳವಡಿಸಲು ಮನವರಿಕೆ ಮಾಡಿಕೊಡಲಾಗುದು. ಜತೆಗೆ ಸಿಗ್ನಲ್ ಅಳವಡಿಕೆ ಕಾರ್ಯ ಶೀಘ್ರದಲ್ಲೆ ಪೂರ್ಣಗೊಳ್ಳಲಿದೆ.
-ಮಹಾಂತೇಶ ಬೀಳಗಿ,
ಪುರಸಭೆ ಮುಖ್ಯಾಧಿಕಾರಿ