ಸುದ್ದಿ ಸಂಕ್ಷೇಪ
ಪದಾಧಿಕಾರಿಗಳ ಆಯ್ಕೆ
ರೋಣ: ರೋಣ ತಾಲೂಕು ಕೋ-ಆಪ್ ಕ್ರೆಡಿಟ್ ಸೂಸೈಟಿಯ ನೂತನ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಡಿವೆಪ್ಪ (ಮುತ್ತಣ್ಣ) ಸಂಗಳದ, ಉಪಾಧ್ಯಕ್ಷರಾಗಿ ಗುರುಪಾದಪ್ಪ ಪಟ್ಟಣಶೆಟ್ಟಿ ಆಯ್ಕೆಯಾಗಿದ್ದಾರೆ. ನಿರ್ದೇಶಕ ಮಂಡಳಿಯ ಸದಸ್ಯರಾಗಿ ಗುರುಪಾದಪ್ಪ ಬೆಲ್ಲದ, ಮುತ್ತಣ್ಣ ಹೊಸಂಗಡಿ, ಅಶೋಕಪ್ಪ ಯಾವಗಲ್ಲ, ಗುಂಡಪ್ಪ ಅಂಗಡಿ, ಸಹನಾ ಕೊಟಗಿ, ಶೇಖವ್ವ ಐಹೊಳಿ, ಸಂಗಪ್ಪ ಪಟ್ಟಣಶೆಟ್ಟಿ, ಶಿವಕುಮಾರ ಕಲಹಾಳ, ಬಸವಂತಪ್ಪ ಅಂಗಡಿ, ಶಿವಕುಮಾರ ಹುಲ್ಲೂರ ಮತ್ತು ನೀಲಪ್ಪ ಹಲಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಿ.ಸಿ. ಕುರಹಟ್ಟಿ, ಸಿ.ಪಿ.ಅಳ್ಳೊಳ್ಳಿ ಮತ್ತು ವಿ.ಸಿ. ಚವಡಿ ಕಾರ್ಯನಿರ್ವಹಿಸಿದರು ಎಂದು ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಮಟ್ಟಕ್ಕೆ ಆಯ್ಕೆ
ನರಗುಂದ: ತಾಲೂಕಿನ ರಡ್ಡೇರನಾಗನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈಚೆಗೆ ನರಗುಂದದಲ್ಲಿ ಜರುಗಿದ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಿ.ಜಿ. ಪಾಟೀಲ, ಶಾಲೆಯ ಪ್ರಧಾನಗುರು ಎಸ್.ಎಸ್. ಮರೋಳ, ಎಂ.ಬಿ. ಯಂಡಿಗೇರಿ, ಜಿ.ಬಿ. ಪೂಜಾರ, ವಿ.ಬಿ. ಹಿರೇಮಠ, ಎನ್.ವಿ. ಗುದಗಾಪುರ, ಎಸ್.ಆರ್. ಬನ್ನಿಗಿಡದ, ಅರ್ಶ್ಯಾದ ಅಹ್ಮದ, ಎಲ್.ಬಿ.ಬಸವಡೆಯರ, ಬೋಜಜಾರ ಹುನಗುಂದ, ಸುನೀಲ ಕಗದಾಳ ಅಭಿನಂದಿಸಿದ್ದಾರೆ.
ಮರಳು ದಂಧೆ: 26 ಲಾರಿ ವಶ
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ಹಾಗೂ ಮರಳು ಸಾಗಾಣಿಕೆ ಮಾಡುತ್ತಿದ್ದ 26 ಲಾರಿಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ. ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜಾಕ್‌ವೆಲ್ ಕೊರ್ಲಹಳ್ಳಿ ಬಳಿ ಇದ್ದು, ನದಿಪಾತ್ರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಯಿಂದ ನೀರು ಸಂಗ್ರಹಣೆಯಲ್ಲಿ ತೊಂದರೆಯಾಗುತ್ತಿದೆ ಎಂದು ನಗರಸಭೆಯ ಸಿಬ್ಬಂದಿ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ವಶಪಡಿಸಿಕೊಂಡಿರುವ ಲಾರಿಗಳ ಪಾಸ್ ಪರ್ಮಿಟ್‌ಗಳ ಪರಿಶೀಲನಾ ಕಾರ್ಯ ಭಾನುವಾರ ರಾತ್ರಿಯ ವರೆಗೆ ನಡೆದಿದೆ. ದಾಳಿಯ ನೇತೃತ್ವವನ್ನು ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ ವಹಿಸಿದ್ದರು. ದಾಳಿಯಲ್ಲಿ ಮುಂಡರಗಿ ತಹಸೀಲ್ದಾರ್, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.