ಸುದ್ದಿ ಸಂಕ್ಷೇಪ
ಇಂದು ಪಂಚಮಸಾಲಿ ಸಭೆ
ನರಗುಂದ: ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿರುವ ಸಂಘದ ಕಾರ್ಯಲಯದಲ್ಲಿ ಸೆ. 23ರ ಸಂಜೆ 4 ಗಂಟೆಗೆ ಲಿಂಗಾಯತ ಪಂಚಮಸಾಲಿ ಸಮಾಜ ವಿವಿಧೋದ್ದೇಶಗಳ ಸಂಘದ ಕಾರ್ಯಕಾರಿ ಮಂಡಳಿಯ ಸಭೆ ಹಾಗೂ ಅ. 23ರಂದು ಜರುಗಲಿರುವ ವೀರರಾಣಿ ಕಿತ್ತೂರ ಚನ್ನಮ್ಮಳ ವಿಜಯೋತ್ಸವದ ಪೂರ್ವಭಾವಿಯಾಗಿ ತಾಲೂಕು ಮಟ್ಟದ ಪಂಚಮಸಾಲಿ ಸಮಾಜ ಬಾಂಧವರ ಸಭೆಯನ್ನು ಕರೆಯಲಾಗಿದ್ದು, ಈ ಸಭೆಗೆ ಸಮಾಜ ಬಾಂಧವರು ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಡಾ. ಸಿ.ಕೆ. ರಾಚನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕ್ರೀಡಾಕೂಟ
ನರಗುಂದ: ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ 2013-14ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಒಕ್ಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಸೆ. 23ರ ಬೆಳಗ್ಗೆ 10ಕ್ಕೆ ಕಾಲೇಜು ರಂಗ ಮಂದಿರದಲ್ಲಿ ಜರುಗಲಿದೆ. ಶಾಸಕ ಬಿ.ಆರ್. ಯಾವಗಲ್, ಧಾರವಾಡ ಪತ್ರಿಕೋದ್ಯಮ ವಿಭಾಗದ ಡಾ. ಬಾಲಸುಬ್ರಮಣ್ಯ, ಡಾ. ನೀಲಾಂಬಿಕಾ ಪಟ್ಟಣಶಟ್ಟಿ, ಪ್ರೊ. ನಾಗರತ್ನಾ ಕುರ್ಡೇಕರ, ಐ.ಎಸ್. ಸೌದಾಗರ, ಎಂ.ಡಿ. ಕಮತಗಿ, ವಿದ್ಯಾರ್ಥಿ ಪ್ರತಿನಿಧಿ ಶಿವನಗೌಡ ದೊಡ್ಡಪ್ಪನವರ, ನಿಂಗಪ್ಪ ವರಗನ್ನವರ, ಪ್ರದೀಪ ಎಸ್.ಕೆ, ಯಾಸ್ಮೀನ ಬೇಪಾರಿ, ಫರೀದಾಬೇಗಂ ಎಲಿಗಾರ, ವಿದ್ಯಾಶ್ರೀ ಮುದಿಯಪ್ಪನವರ, ರೇಷ್ಮಾ ಬಾನೇಜರ, ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕಾರಿ ಸಮಿತಿಗೆ ಆಯ್ಕೆ
ಗದಗ: ಗದಗ-ಬೆಟಗೇರಿ ರಜಪೂತ ಸಮಾಜದ ಬಾಲಾಜಿ ಮಂದಿರ ಟ್ರಸ್ಟ್ನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ವೀರೇಂದ್ರಸಿಂಗ್ ದತ್ತುಸಿಂಗ್ ದೊಡ್ಡಮನಿ, ಕಾರ್ಯದರ್ಶಿಯಾಗಿ ಸುನೀಲಸಿಂಗ್ ದೀಪಸಿಂಗ್ ಲದ್ದಿಗೇರಿ ಅವರನ್ನು ಈಚೆಗೆ ಆಯ್ಕೆ ಮಾಡಲಾಯಿತು ಎಂದು ರಜಪೂತ ಸಮಾಜದ ಅಧ್ಯಕ್ಷ ಶಂಕರಸಿಂಗ್ ಬ್ಯಾಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತುಳಜಾರಾಮಸಿಂಗ್ ಕಾಟೇವಾಲ, ಹನುಮಾನಸಿಂಗ್ ಬ್ಯಾಳಿ, ಗಣೇಶಸಿಂಗ್ ಮಿಠಡೆ, ಶೇಡುಸಿಂಗ್ ಜಮಾದಾರ, ರಾಜಾರಾಮಸಿಂಗ್ ಕಾಟೇವಾಲ ಸರ್ವಾನುಮತದಿಂದ ಆಯ್ಕೆಗೊಂಡರು. ರಜಪೂತ ಸಮಾಜದ ಅಧ್ಯಕ್ಷ ಶಂಕರಸಿಂಗ್ ಬ್ಯಾಳಿ ನೇತೃತ್ವದಲ್ಲಿ ಈಚೆಗೆ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರನ್ನು ಅಭಿನಂದಿಸಿ ಅಧಿಕಾರ ಗ್ರಹಣ ನೆರವೇರಿಸಲಾಯಿತು. ಅಧ್ಯಕ್ಷ ಶಂಕರಸಿಂಗ್ ಬ್ಯಾಳಿ ಮಾತನಾಡಿ, ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ, ಹಲವು ಕ್ಷೇತ್ರಗಳಲ್ಲಿ ರಚನಾತ್ಮಕ ಕಾರ್ಯ ಚಟುವಟಿಕೆ ಆಯೋಜಿಸಿ ಸಮಾಜದ ಪ್ರಗತಿ ಮಾಡುವ ಸದುದ್ದೇಶದಿಂದ ಕಾರ್ಯಕಾರಿ ಸಮಿತಿ ನೇಮಕ ಮಾಡಲಾಗಿದೆ. 43 ಕಾರ್ಯಕಾರಿ ಸಮಿತಿ ಸದಸ್ಯರ ಸಲಹೆ ಅಭಿಪ್ರಾಯ ಪಡೆದು ಸಮಾಜದ ಪರ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಆರ್.ಕೆ. ಜಮಾದಾರ, ಶೇಡಸಿಂಗ್ ದೊಡ್ಡಮನಿ, ಅರ್ಜುನಸಿಂಗ್ ಪುಲಾನೇಕರ, ಶಾಂತಾರಾಮಸಿಂಗ್ ಜಮಾದಾರ, ಇತರರು ಉಪಸ್ಥಿತರಿದ್ದರು.