ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಆರೋಗ್ಯ ಕಾಪಾಡುವಲ್ಲಿ ಪೌರಸೇವೆ ಅನನ್ಯ: ಪ್ರಸನ್ನಕುಮಾರ

Lingaraj Badiger
Updated On : 24 Sept 2013, 11:13 am

ಗದಗ: ನಗರ ನೈರ್ಮಲ್ಯ ಕಾಪಾಡಲು ಪ್ರಾಮುಖ್ಯತೆ ನೀಡಿ, ಜನಸಾಮಾನ್ಯರ ಆರೋಗ್ಯ ಕಾಪಾಡಲು ಪ್ರಾಮಾಣಿಕ ಸೇವೆ ಸಲ್ಲಿಸುವ ಪೌರಸೇವಾ ನೌಕರರ ಕಾರ್ಯ ಅನನ್ಯ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ಸೋಮವಾರ ಸ್ಥಳೀಯ ನಗರಸಭೆ ಆವರಣದಲ್ಲಿ ಗದಗ-ಬೆಟಗೇರಿ ನಗರಸಭೆ ಹಾಗೂ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಬೆಂಗಳೂರ ಇವುಗಳ ಆಶ್ರಯದಲ್ಲಿ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪೌರಸೇವಾ ನೌಕರರು ತಾವು ನಿರ್ವಹಿಸುವ ಕಾರ್ಯವನ್ನು ಕಾಯಕವೇ ಕೈಲಾಸ ಮಾದರಿಯಲ್ಲಿ ಶ್ರದ್ಧೆ, ಗೌರವದಿಂದ ನಿರ್ವಹಿಸಬೇಕಿದೆ. ನಗರದಲ್ಲಿ 250 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರೂ ಪ್ರತಿದಿನ ನಿಗದಿತ ಪ್ರಮಾಣದಲ್ಲಿ ಕಾರ್ಯಗಳು ಜರುಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೌರ ನೌಕರರು ಕಾರ್ಯದಲ್ಲಿ ಮತ್ತಷ್ಟು ಚುರುಕಿನಿಂದ ಶ್ರಮಿಸಿ ನಗರವನ್ನು ಬರುವ ಅಕ್ಟೋಬರ್ 2ರ ವೇಳೆಗೆ ನೈರ್ಮಲ್ಯ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಪ್ರಯತ್ನಿಸಬೇಕು. ಜಿಲ್ಲಾಡಳಿತ ಹಾಗೂ ನಗರಸಭೆ ಆಡಳಿತ ಪೌರಸೇವಾ ನೌಕರರಿಗೆ ದೊರೆಯಬೇಕಾದ ಎಲ್ಲ ಬಾಕಿ ವೇತನ ಹಾಗೂ ಆಧುನಿಕ ಸಲಕರಣೆಗಳನ್ನು ಸಕಾಲದಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದರು.
ಮುಖ್ಯ ವಿಭಾಗಾಧಿಕಾರಿ ಐ.ಜಿ. ಗದ್ಯಾಳ ಮಾತನಾಡಿದರು. ಈ ಸಂದರ್ಭ ವಸತಿ ಯೋಜನೆಯ ಅಡಿ ಪೌರ ಕಾರ್ಮಿಕ ಕುಟುಂಬಗಳಿಗೆ ನಿವೇಶನ ಹಾಗೂ ಇಲಾಖೆಯ ನಿಯಮಾವಳಿಗಳ ಪ್ರಕಾರ ರೋಗನಿರೋಧಕ ಸಲಕರಣೆಗಳೊಂದಿಗೆ ಅಗತ್ಯ ಸೇವಾ ಸೌಲಭ್ಯ ಒದಗಿಸುವಂತೆ ಪೌರ ಸೇವಾ ನೌಕರರ ಸಂಘದ ಪರವಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಮಹಾತ್ಮಾಗಾಂಧಿ, ಸಂಗೋಳ್ಳಿ ರಾಯಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿಗಳಿಂದ ಮಾಲಾರ್ಪಣೆ ಜರುಗಿತು. ನಿವೃತ್ತ ಪೌರ ಕಾರ್ಮಿಕರಿಗೆ, ಪೌರಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು. ರಮೇಶ ದೇಸಾಯಿ, ಪೌರಾಯುಕ್ತ ಎಂ.ಬಿ. ನಡುವಿನಮನಿ, ಎಲ್.ಜಿ. ಪತ್ತಾರ, ಬಿ.ಎಸ್. ಮದುಸೂಧನ, ರಾಜ್ಯ ಸಂಘದ ಕಾರ್ಯದರ್ಶಿ ವಿರುಪಾಕ್ಷ ರಾಮಗಿರಿ, ರಾಮು ಆಸಂಗಿ, ಸುರೇಶ ಕಲ್ಮನಿ, ತಾಯಪ್ಪ ಗೌಡರ ಇದ್ದರು. ಸಿದ್ದು ಹುಣಸಿಮರದ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement