ಇಂದು ದಿನಾಚರಣೆ
ಗದಗ: ನಗರದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಸೆ. 24ರಂದು ಬೆಳಗ್ಗೆ 10ಕ್ಕೆ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಎಸ್.ಎಸ್. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಐಪಿಎಸ್ ಅಧಿಕಾರಿ ಬಿ.ಎಸ್. ನ್ಯಾಮಗೌಡ್ರ, ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಆರ್.ಎಲ್. ಗುಂಜಿಕರ ಆಗಮಿಸುವರು. ಪ್ರಾಚಾರ್ಯ ಬಿ.ಬಿ. ಗೌಡರ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಆರೋಗ್ಯ ಕುರಿತು ಉಪನ್ಯಾಸ
ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿಯ ಸಾಪ್ತಾಹಿಕ ಸಭೆಯು ಗದಗನ ರೋಟರಿ ಐ ಕೇರ್ ಸೆಂಟರ್ನಲ್ಲಿ ಈಚೆಗೆ ಡಾ ಪ್ರದೀಪ ಉಗಲಾಟ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಎಸ್.ಎಸ್. ಹಿರೇಮಠ ಯೋಗ ಮತ್ತು ಆರೋಗ್ಯ ಕುರಿತು ಉಪನ್ಯಾಸ ನೀಡಿದರು. ಅತಿಥಿಗಳಾಗಿ ನವೀನ ಕುಷ್ಟಗಿ, ಎಸ್.ಎಸ್. ಹಿರೇಮಠ, ಬಾಲಕೃಷ್ಣ ಕಾಮತ, ಅರವಿಂದಸಿಂಗ್ ಬ್ಯಾಳಿ ಮುಂತಾದವರು ಉಪಸ್ಥಿತರಿದ್ದರು.
ಬೈಕ್ ಸ್ಕಿಡ್: ಓರ್ವ ಸಾವು
ಗದಗ: ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು, ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತನನ್ನು ಯಾವಗಲ್ಲ ಗ್ರಾಮದ ನಿವಾಸಿ ಚನ್ನಪ್ಪ ಶಿವಪ್ಪ ಹೆಬ್ಬಳ್ಳಿ (24) ಎಂದು ಗುರುತಿಸಲಾಗಿದೆ. ಬೈಕ್ನಲ್ಲಿದ್ದ ಇನ್ನೊರ್ವನಿಗೆ ತೀವ್ರ ಗಾಯವಾಗಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಗುಪ್ಸೆ: ವ್ಯಕ್ತಿ ಆತ್ಮಹತ್ಯೆ
ಗದಗ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವೀರನಾರಾಯಣ ಬಡಾವಣೆಗೆ ತೆರಳುವ ರಸ್ತೆ ಪಕ್ಕದ ಶೆಡ್ಡಿನಲ್ಲಿ ನಡೆದಿದೆ. ಮೃತನನ್ನು ಶಿರಹಟ್ಟಿ ಪಟ್ಟಣದ ಬಸಪ್ಪ ರಾಮಪ್ಪ ಹಾದಿಮನಿ(54) ಎಂದು ಗುರುತಿಸಲಾಗಿದೆ. ಒಂದು ವಾರದ ಹಿಂದೆ ಶಿರಹಟ್ಟಿ ಪಟ್ಟಣದಿಂದ ಗದಗ ನಗರಕ್ಕೆ ಬಂದ ಬಸಪ್ಪ ಯಾವುದೋ ಕಾರಣಕ್ಕೆ ಮಾನಸಿಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: ನಾಲ್ವರ ಬಂಧನ
ಗದಗ: ಬೆಟಗೇರಿ ಸಮೀಪದ ನಾಗಸಮುದ್ರ ಗ್ರಾಮದ ಪ್ರಾಥಮಿಕ ಶಾಲೆಯ ಹಿಂದಿನ ಬಯಲು ಜಾಗೆಯಲ್ಲಿ ಇಸ್ಪೀಟ್ ಆಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ನಿವಾಸಿಗಳಾದ ಮಂಜುನಾಥ ಬಸವಂತಪ್ಪ ಮುಳಗುಂದ, ಮಾಂತೇಶ ಪರಸಪ್ಪ ಪೂಜಾರ, ಶರಣಪ್ಪ ಚಂದ್ರಪ್ಪ ಇಟಗಿ, ಮಾದೇವಗೌಡ ಹನಮಂತಗೌಡ್ರ ಬಂಧಿತ ಆರೋಪಿಗಳು. ದಾಳಿ ಸಂದರ್ಭದಲ್ಲಿ ಓರ್ವನು ಪರಾರಿಯಾಗಿದ್ದು, ಬಂಧಿತರಿಂದ ರು. 2,890 ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.