ಪುಟ್ಟರಾಜರ ಶಕ್ತಿ ಮೇಲೆ ಆಶ್ರಮ ಉನ್ನತಿ
ಕನ್ನಡಪ್ರಭ ವಾರ್ತೆ, ಗದಗ, ಸೆ. 23
ಲಿಂಗೈಕ್ಯ ಪುಟ್ಟರಾಜ ಕವಿ ಗವಾಯಿಗಳ ಅಪಾರ ಭಕ್ತ ಸಮುದಾಯ, ಅವರಲ್ಲಿದ್ದ ಅದ್ವಿತೀಯ ಸಂಗೀತ ವಿದ್ವತ್ ಮತ್ತು ಅಂಧ ಅನಾಥ ಮಕ್ಕಳ ಬಗ್ಗೆ ಅವರು ಹೊಂದಿದ ಅಪರಿಮಿತ ಕಾಳಜಿಯಿಂದ ಗದುಗಿನ ವೀರೇಶ್ವರ ಪುಣ್ಯಾಶ್ರಮ ನಾಡಿನ ಒಂದು ಅಘೋಷಿತ ಸಂಗೀತ ವಿಶ್ವವಿದ್ಯಾಲಯ, ಪುಟ್ಟರಾಜರು ಲಿಂಗೈಕ್ಯರಾದ ನಂತರವೂ ಅವರ ಭಕ್ತ ಸಮುದಾಯ ಮತ್ತು ಅವರ ಅಮರ ಶಕ್ತಿಯಿಂದ ಉತ್ತಮವಾಗಿಯೇ ನಡೆಯುತ್ತಿದೆ.
2010ರ ಸೆ. 17ರಂದು ಪುಟ್ಟರಾಜರು ಲಿಂಗೈಕ್ಯರಾದ ನಂತರ ಅವರ ಉತ್ತರಾಧಿಕಾರಿಯ ನೇಮಕ ವಿಷಯದಲ್ಲಿ ಹಲವಾರು ರೀತಿ ಸಮಸ್ಯೆ ಸೃಷ್ಟಿಯಾದರೂ ಕೊನೆಗೆ ಮೊದಲೇ ನಿರ್ಧರಿಸಿದಂತೆ ಕಲ್ಲಯ್ಯಜ್ಜನವರನ್ನೇ ನೇಮಕ ಮಾಡಲಾಯಿತು. ವೀರೇಶ್ವರ ಪುಣ್ಯಾಶ್ರಮದಲ್ಲಿ ಹಿಂದಿನಂತೆ ಇಂದೂ ದಾಸೋಹ ಕಾರ್ಯಕ್ರಮ ಜರುಗುತ್ತಿದ್ದು, ನೂರಾರು ವಿದ್ಯಾರ್ಥಿಗಳು ಹಾಗೂ ಆಶ್ರಮಕ್ಕೆ ಆಗಮಿಸುವ ಭಕ್ತರೂ ಹೆಚ್ಚಿದ್ದು ಎಲ್ಲರಿಗೂ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ.
ಒಂದು ದಿನದ ದಾಸೋಹ ಕಾರ್ಯಕ್ರಮದಲ್ಲಿ ಸಾವಿರಕ್ಕಿಂತಲೂ ಅಧಿಕ ಜನರು ಪಾಲ್ಗೊಳ್ಳುವರು. ಪ್ರತಿದಿನ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದೆ. ದಿನಕ್ಕೆ ದಾಸೋಹದ ಖರ್ಚು ಸುಮಾರು ರು. 8ರಿಂದ 10 ಸಾವಿರ. ಇದನ್ನು ಆಶ್ರಮದ ವತಿಯಿಂದ ಇಲ್ಲವೇ ಯಾರಾದರೂ ಭಕ್ತರು ವಹಿಸಿಕೊಳ್ಳುತ್ತಾರೆ. ಪ್ರತಿ ಅಮಾವಾಸ್ಯೆಯಂದು, ಶ್ರೀ ಗುರು ಪುಟ್ಟರಾಜ ಗಾನ ಲಹರಿ ಮಾಸಿಕ ಸಂಗೀತ ಕಾರ್ಯಕ್ರಮ ಆಶ್ರಮದಲ್ಲಿ ಆಯೋಜಿಸುವ ಮೂಲಕ ಸಂಗೀತದ ಮೂಲಕವೂ ನಮನ ಸಲ್ಲಿಸಲಾಗುತ್ತದೆ.
ಅಂಧ ಅನಾಥ ವಿದ್ಯಾರ್ಥಿಗಳಿಗೆ ಆಶ್ರಮದಲ್ಲಿಯೇ ವಾಸ್ತವ್ಯ ಕಲ್ಪಿಸಲಾಗಿದೆ. ಇಲ್ಲಿನ ಅಂಧ ಅನಾಥ ಸಾವಿರಾರು ವಿದ್ಯಾರ್ಥಿಗಳು ಸಂಗೀತವನ್ನು ಕಲಿತು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಆಶ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಇಂದಿಗೂ ಸಂಗೀತ ಕಲಿಯುತ್ತಿದ್ದಾರೆ. ಹೊರ ಜಿಲ್ಲೆ, ರಾಜ್ಯಗಳಿಂದ, ವಿದೇಶಗಳಿಂದ ವೀರೇಶ್ವರ ಪುಣ್ಯಾಶ್ರಮಕ್ಕೆ ಸಂಗೀತ ಕಲಿಯಲು ಬರುತ್ತಾರೆ. ಅದರಲ್ಲಿಯೂ ಗುಲ್ಬರ್ಗ, ರಾಯಚೂರ, ಸೊಲ್ಲಾಪುರ, ಧಾರವಾಡ, ಶಿವಮೊಗ್ಗ ಹಾಗೂ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಸಂಗೀತ ಆಸಕ್ತರು ಇಲ್ಲಿ ಪಾಠ ಕಲಿತಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ: 2008ರಲ್ಲಿ ವೀರೇಶ್ವರ ಪುಣ್ಯಾಶ್ರಮದಲ್ಲಿ 195 ವಿದ್ಯಾರ್ಥಿಗಳು ಕಲಿತಿದ್ದು, ಅದರಲ್ಲಿ ಒಬ್ಬ ಅಂಗವಿಕಲ ಹಾಗೂ ಮೂವರು ಅಂಧರು ಸೇರಿರುತ್ತಾರೆ. 2009ರಲ್ಲಿ 197 ವಿದ್ಯಾರ್ಥಿಗಳು ಸಂಗೀತ ಪಾಠ ಕಲಿತಿದ್ದು, ಅದರಲ್ಲಿ ಮೂವರು ಅಂಗವಿಕಲರು ಹಾಗೂ 10 ಜನ ಅಂಧರಿದ್ದಾರೆ. 2010ರಲ್ಲಿ 190 ವಿದ್ಯಾರ್ಥಿಗಳು ಕಲಿತಿದ್ದು, ಅದರಲ್ಲಿ ಒಬ್ಬ ಅಂಗವಿಕಲ ಹಾಗೂ 8 ಜನ ಅಂಧರಿದ್ದಾರೆ. ಇನ್ನು 2011ರಲ್ಲಿ 150 ವಿದ್ಯಾರ್ಥಿಗಳು ಕಲಿತಿದ್ದು, ಅವರಲ್ಲಿ 4 ಜನ ಅಂಗವಿಕಲ ವಿದ್ಯಾರ್ಥಿಗಳು ಹಾಗೂ 7 ಜನ ಅಂಧರು ಸೇರಿದ್ದಾರೆ. 2012ರಲ್ಲಿ 148 ವಿದ್ಯಾರ್ಥಿಗಳು ಸಂಗೀತ ಪಡೆದಿದ್ದು, ಅವರಲ್ಲಿ 4 ಜನ ಅಂಗವಿಕಲರು, 3 ಜನ ಅಂಧರು, ಪ್ರಸಕ್ತ ಸಾಲಿನಲ್ಲಿ 124 ಜನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
-ಶಿವಕುಮಾರ ಕುಷ್ಟಗಿ