ರೆಡ್‌ಕ್ರಾಸ್ ಸಂಸ್ಥೆ ಸಂಜೀವಿನಿ: ಪ್ರಾಚಾರ್ಯ ಉಮೇಶ ಶಿರೋಳ
ಗಜೇಂದ್ರಗಡ: ಪ್ರಕೃತಿ ವಿಕೋಪ, ಬೆಂಕಿ ಅನಾಹುತ ಜತೆಗೆ ಯುದ್ದ ಭೂಮಿಯಲ್ಲಿ ಗಾಯಗೊಂಡು ರಕ್ತ ಕೊರತೆಯಿಂದ ಬಳಲುತ್ತಿರುವರಿಗೆ ರೆಡ್‌ಕ್ರಾಸ್ ಸಂಸ್ಥೆ ಸಂಜೀವಿನಿಯಾಗಿದೆ ಎಂದು ಪ್ರಾಚಾರ್ಯ ಉಮೇಶ ಶಿರೋಳ ಹೇಳಿದರು. ಅವರು ಈಚೆಗೆ ಸ್ಥಳೀಯ ಎಸ್.ಎಂ. ಭೂಮರಡ್ಡಿ ಪದವಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಯುವ ರೆಡ್‌ಕ್ರಾಸ್ ಘಟಕ ಉದ್ಘಾಟಿಸಿ ಮಾತನಾಡಿದರು. ಜತೆಗೆ ನಿಷ್ಪಕ್ಷಪಾತ ಧೋರಣೆಯಿಂದ ಸ್ಥಾಪಿತವಾದ ಈ ಸಂಸ್ಥೆ ವಿಶ್ವದ ಉದ್ದಗಲಕ್ಕೂ ತನ್ನ ವ್ಯಾಪ್ತಿ ಪಸರಿಸಿ ಮಾನವೀಯತೆ ಮೆರೆದಿದೆ ಎಂದರು. ರೆಡ್‌ಕ್ರಾಸ್ ವ್ಯವಸ್ಥಾಧಿಕಾರಿ ಬಿ.ವಿ. ಮುನವಳ್ಳಿ ಮಾತನಾಡಿದರು. ಸಂಸ್ಥೆಯ ಎಲ್.ಕೆ. ವದ್ನಾಳ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕ ಎಸ್.ಎಸ್. ಚುಂಚಾ, ಎಸ್.ಎಚ್. ಪವಾರ, ಆರ್.ಕೆ. ಚವ್ಹಾಣ, ಟಿ.ಟಿ. ಗೋಂಧಳೆ, ಎಲ್.ಕೆ. ಹಿರೇಮಠ, ವೈ.ಎಫ್. ಗೌಡರ, ಉಮೇಶ ಶೀಲವಂತರ, ಎನ್.ಕೆ. ಅಂಗಡಿ, ಎಸ್.ಎಸ್. ಕಿನ್ನಾಳ, ಆರ್.ಎನ್. ರಾಮದುರ್ಗ ಇದ್ದರು. ಶಿಥಲ್. ಜಿ ಸ್ವಾಗತಿಸಿದರು. ಪ್ರದೀಪ ಕರ್ಣೆ ನಿರೂಪಿಸಿದರು. ಅಂಬಿಕಾ ದಮಾಮ ವಂದಿಸಿದರು.
ಒಗ್ಗಟ್ಟಿನಿಂದ ಸಾಧನೆ ಸಾಧ್ಯ
ಗದಗ: ಒಗ್ಗಟ್ಟು, ಸಂಘಟನೆ ಹಾಗೂ ಏಕಮತ ಸಮಾಜದಿಂದ ಸಾಧನೆ ಅಭಿವೃದ್ದಿ ಸಾಧ್ಯ ಎಂದು ಗದಗ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಸ್.ಕೆ. ಚವ್ಹಾಣ ಹೇಳಿದರು. ಅವರು ಈಚೆಗೆ ಗದಗ ಜಿಲ್ಲಾ ದಲಿತ ಸಂಘರ್ಷ ಸಮಾನತಾ ಸಮಿತಿಯ ವತಿಯಿಂದ ಸಲ್ಲಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಅಗತ್ಯ ಸೌಲಭ್ಯಗಳು ಕಲ್ಪಿಸುವ ಭರವಸೆ ನೀಡಿದರು. ಗದಗ ಜಿಲ್ಲಾ ದಲಿತ ಸಂಘರ್ಷ ಸಮಾನತಾ ಸಮಿತಿಯ ಅಧ್ಯಕ್ಷ ಸಿದ್ದು ಹಾದಿಮನಿ ಮಾತನಾಡಿದರು. ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ವಿನಾಯಕ ಹಾದಿಮನಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಮಣ್ಣಮ್ಮನವರ, ಸಹ-ಕಾರ್ಯದರ್ಶಿ ಪ್ರಕಾಶ ಹೊಸಳ್ಳಿ, ಖಜಾಂಚಿ ರಾಘವೇಂದ್ರ ಹಾದಿಮನಿ, ಸಂಘಟನಾ ಕಾರ್ಯದರ್ಶಿ ಪ್ರಧಾನಿ ಹಾದಿಮನಿ ಹಾಗೂ ಗದಗ ಜಿಲ್ಲಾ ದಲಿತ ಸಂಘರ್ಷ ಸಮಾನತಾ ಸಮಿತಿಯ ಪದಾಧಿಕಾರಿಗಳು ಇದ್ದರು.
ಅಪಘಾತ: ಓರ್ವ ಸಾವು
ಲಕ್ಷ್ಮೇಶ್ವರ: ಸಮೀಪದ ಹುಬ್ಬಳ್ಳಿ ರಸ್ತೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ಜರುಗಿದೆ. ಮೃತನನ್ನು ಬಾಲೇಹೊಸೂರು ಗ್ರಾಮದ ನಿವಾಸಿ ಮದರಸಾಬ ಮಾಚೇನಹಳ್ಳಿ(28) ಎಂದು ಗುರುತಿಸಲಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.