ಗಲಭೆಗೆ ಸಂಬಂಧಿಸಿದ 14 ಜನರ ಬಂಧನ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸೆ. 21ರಂದು ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮಂಗಳವಾರ ಮತ್ತೆ 14 ಜನರನ್ನು ಬಂಧಿಸಲಾಗಿದೆ ಎಂದು ಪಿಎಸ್‌ಐ ವಿಕಾಸ ಲಮಾಣಿ ಹೇಳಿದರು. ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಪಟ್ಟಣದಲ್ಲಿ ಶಾಂತಿ ವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ಮರಳಿದ್ದು, ಅದಕ್ಕಾಗಿ ಸೋಮವಾರ ಸಂಜೆಯಿಂದ 144 ಕಲಂನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ಆದರೆ, ಪಟ್ಟಣದಲ್ಲಿ ಮತ್ತೆ ಅಶಾಂತಿ ವಾತಾವರಣ ನಿರ್ಮಾಣವಾಗಬಾರದು ಎನ್ನುವ ದೃಷ್ಟಿಯಿಂದ ಈಗಿರುವ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗುತ್ತದೆ. ಅಲ್ಲದೆ ಘಟನೆಯಲ್ಲಿ ಭಾಗಿಯಾದ ನಿಜವಾದ ಆರೋಪಿಗಳ ಬಂಧನ ಕಾರ್ಯ ಇನ್ನೂ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.