ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ತೋಂಟದ ಶ್ರೀಗಳು ನುಡಿದಂತೆ ನಡೆಯುತ್ತಾರೆ

Lingaraj Badiger
Updated On : 25 Sept 2013, 11:18 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಸೆ. 24
ಡಂಬಳದಲ್ಲಿ ತೋಂಟದ ಶ್ರೀಗಳು ತಮ್ಮ ಮಠದ ಅತ್ಯಮೂಲ್ಯವಾದ ಜಮೀನನ್ನು ಶಾಲೆಗಳಿಗೆ ಹಾಗೂ ಕಡುಬಡವರ ನಿವೇಶನಕ್ಕೆ ದಾನವಾಗಿ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದು, ಈ ಹಿಂದೆ ತೋಂಟದ ಶ್ರೀಗಳು ನುಡಿದಂತೆ ಈಗ ನಡೆದುಕೊಂಡಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಈಚೆಗೆ ತಾಲೂಕಿನ ಡಂಬಳದಲ್ಲಿ 141 ಮನೆಗಳ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮದ ಬಾಲಕರ ಸರ್ಕಾರಿ ಕನ್ನಡ ಶಾಲೆಗೆ, ಬಾಲಕಿಯರ ಸರ್ಕಾರಿ ಕನ್ನಡ ಶಾಲೆಗೆ, ಸರ್ಕಾರದ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ 2 ವಿದ್ಯಾರ್ಥಿ ನಿಲಯಗಳಿಗೆ, ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ ಮತ್ತು ರೈತ ಕೇಂದ್ರಕ್ಕೆ ಅಲ್ಲದೆ ಅನೇಕ ಸಂಘ ಸಂಸ್ಥೆಗಳಿಗೆ ಜಮೀನುದಾನ ನೀಡಿದ್ದಾರೆ. ಈಗ ಡಂಬಳದ ಹೊರಭಾಗದಲ್ಲಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನಿರ್ಮಿಸಲಾದ ದಲಿತರ ಮತ್ತು ಅಲ್ಪಸಂಖ್ಯಾತರ ಬಡಾವಣೆಗಾಗಿ ತಮ್ಮ ಭಕ್ತರಿಂದ ಜಮೀನನ್ನು ಕೊಡಿಸಿದರು. ಈ ಬಡಾವಣೆಯ ದಲಿತರ ಮನೆಗಳ ನಿರ್ಮಾಣಕ್ಕೆ ಶ್ರೀಮಠದಿಂದ ಕಂತುಗಳನ್ನು ತುಂಬಿರುವುದು ದಲಿತರ ಬಗೆಗಿರುವ ಕಾಳಜಿಗೆ ಸಾಕ್ಷಿಯಾಗಿದೆ. ಅವರು ಕೇವಲ ಬಸವತತ್ವವನ್ನು ಹೇಳುವುದಿಲ್ಲ, ಹೇಳಿದಂತೆ ಬದುಕುತ್ತಾರೆ. ನುಡಿದಂತೆ ನಡೆಯುತ್ತಾರೆ. ಅಷ್ಟೇ ಅಲ್ಲ ಅನೇಕ ಊರುಗಳಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ತಮ್ಮ ಮಠದ ಜಮೀನನ್ನು ದಾನ ನೀಡಿ, ದಾನಿಗಳಿಗೆ ಮೇಲ್ಪಂಕ್ತಿ ಹಾಕಿದ್ದಾರೆ. ತಮ್ಮ ಸರ್ಕಾರದಿಂದ ಡಂಬಳದಲ್ಲಿ ಇನ್ನು 160 ಮನೆಗಳನ್ನು ಶ್ರೀಗಳ ನೆರವನ್ನು ಪಡೆದು ನಿರ್ಮಿಸಿಕೊಡುವುದಾಗಿ ಹೇಳಿದರು.
ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಮಾತನಾಡಿ, ದೀನದಲಿತರ, ದುಃಖಿತರ ಕಣ್ಣೀರು ಒರೆಸುವುದೇ ಮಠಾಧೀಶರ ಕರ್ತವ್ಯವಾಗಿದೆ. ಈ ಭಾಗದ ದಲಿತರ ಒಳಪಂಗಡದಲ್ಲಿದ್ದ ನ್ಯಾಯವನ್ನು ಶಮನಗೊಳಿಸುವುದಕ್ಕಾಗಿ ಈ ಬಡಾವಣೆ ನಿರ್ಮಿಸುವ ಅಗತ್ಯ ಉದ್ಭವಿಸಿತು ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ, ಜಿಪಂ ಸದಸ್ಯ ಬೀರಪ್ಪ ಬಂಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಯರಾಶಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ನಿಂಗಬಸಪ್ಪ ಪ್ಯಾಟಿ, ಶಿವಪ್ಪ ಪ್ಯಾಟಿ ಇದ್ದರು. ಮರಿಯಪ್ಪ ಹರಿಜನ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement