ಧರ್ಮದ ಪಥದಲ್ಲಿ ನಡೆದರೆ ಸಂತೃಪ್ತಿ: ಕವಿತಾ ದಂಡಿನ
ಗದಗ: ಧರ್ಮದ ಪಥದಲ್ಲಿ ನಡೆಯುವವರಿಗೆ, ಧರ್ಮದ ಸಂಸ್ಕಾರವನ್ನು ಹೊಂದಿದವರಿಗೆ ಸಾಧನೆ ಮತ್ತು ಆತ್ಮಸಂತೃಪ್ತಿಯೊಂದಿಗೆ ಯಶಸ್ಸು ಸಿಗಲಿದೆ ಎಂದು ಗದಗ ತಾಲೂಕು ಕಸಾಪದ ಗೌರವ ಕಾರ್ಯದರ್ಶಿ ಕವಿತಾ ದಂಡಿನ ಅಭಿಪ್ರಾಯಪಟ್ಟರು.
ಅವರು ಈಚೆಗೆ ನಗರದ ಪಿ.ಎ. ಕುಲಕರ್ಣಿ ಕಟ್ಟಡದಲ್ಲಿ ಜಿಲ್ಲಾ ದಿಗಂಬರ ಜೈನ್ ಸಂಘದ ನೇತೃತ್ವದಲ್ಲಿ ಏರ್ಪಡಿಸಿದ್ದ ದಶಲಕ್ಷಣ ಪರ್ವಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಧಾರ್ಮಿಕ ವ್ರತಗಳನ್ನು ಆಚರಿಸುವ ಮೂಲಕ ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸಿಕೊಳ್ಳಬಹುದಾಗಿದೆ. ಚಿಂತನ ಮಂಥನ ಸಮಾಲೋಚನೆಗಳ ಸಂಗಮವಾಗಿರುವ ದಶಲಕ್ಷಣ ಪರ್ವಾಚರಣೆ ದಿಗಂಬರ ಜೈನ ಸಮುದಾಯದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ. ಇಂದಿನ ವೈಜ್ಞಾನಿಕ ಮತ್ತು ಆಧುನಿಕ ದಿನಗಳಲ್ಲಿ ಧಾರ್ಮಿಕ ಮನೋಭಾವ ಜನತೆಯಿಂದ ಕೊಂಚ ದೂರ ಸರಿಯುತ್ತಿದೆ. ಹಾಗಾಗದಂತೆ ಧರ್ಮ ಗುರುಗಳು, ಹಿರಿಯರು ಪಾಲಕರು ನಮ್ಮ ಯುವ ಜನಾಂಗವನ್ನು, ಸಮಾಜವನ್ನು ಧಾರ್ಮಿಕ ನೆಲೆಗಟ್ಟಿನೊಂದಿಗೆ ಮುನ್ನಡೆಸಬೇಕಿದೆ ಎಂದರು.
ಜಿಲ್ಲಾ ದಿಗಂಬರ ಜೈನ ಸಂಘದ ಅಧ್ಯಕ್ಷ ಬಿ.ಎಸ್. ನಾವಳ್ಳಿ, ಮಾಜಿ ಅಧ್ಯಕ್ಷ ಎನ್.ಡಿ. ಪಾಟೀಲ, ಗಿರೀಶ ಕಬಾಡಿ, ಪ್ರಕಾಶ ಮುತ್ತಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ.ಎಫ್. ದಂಡಿನ ಹಾಗೂ ಕವಿತಾ ದಂಡಿನ ಅವರನ್ನು ಸನ್ಮಾನಿಸಲಾಯಿತು. ಡಾ. ಕೆ.ಡಿ. ಪಾಟೀಲ, ಎಂ.ಟಿ. ಕಬ್ಬಿಣ, ಬಿ.ಎನ್. ತುಕೋಳ, ಪಿ.ಎನ್. ಅಲ್ಲಯ್ಯನವರ, ಎಸ್.ಎಸ್. ಬೋಂಗಾರ್ಡೆ, ಪದ್ಮಾವತಿ ಕುಲಕರ್ಣಿ, ಸುಮಿತ್ರಾ ದೇಸಾಯಿ, ಲಲಿತಾ ಕಾಸರ, ಸುಕನ್ಯಾ ಕುಲಕರ್ಣಿ, ಸುಮನ್ ಮುತ್ತಿನ, ಮಧುಮತಿ ಕಬ್ಬಿಣ, ಶೋಭಾ ಇಂಚಲ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಪಿ.ಎ. ಕುಲಕರ್ಣಿ ಸ್ವಾಗತಿಸಿ, ನಿರೂಪಿಸಿದರು. ಶಿಥಲ್ ದೇಸಾಯಿ ವಂದಿಸಿದರು.