ಸಂಘಟನೆಗಳು ಸಮಾಜಮುಖಿ ಕಾರ್ಯ ಮಾಡಲಿ
ಗದಗ: ಸಾಮಾಜಿಕ ಸೇವಾ ಸಂಘಟನೆಗಳು ಸಮಾಜ ಮುಖಿಯಾಗಿ ರಚನಾತ್ಮಕ ಮತ್ತು ಜನಪರ ಕಾರ್ಯ ಹಮ್ಮಿಕೊಳ್ಳಬೇಕೆಂದು ಗದಗ-ಬೆಟಗೇರಿ ನಗರಸಭೆಯ ಸದಸ್ಯ ಬಿ.ಬಿ. ಅಸೂಟಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ನ ವತಿಯಿಂದ ಸ್ಥಳೀಯ ಕಾಶೀ ವಿಶ್ವನಾಥ ನಗರದಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ಔಷಧ ಉಚಿತ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಇನ್ನರ್ವ್ಹೀಲ್ ಕ್ಲಬ್ ಜನರ ಬಳಿಗೆ ಬಂದು ಈ ರೀತಿಯ ಸೇವಾ ಕೈಂಕರ್ಯವನ್ನು ಕೈಗೊಂಡಿರುವುದು ಅಭಿನಂದನೀಯ. ಜನರ ಮನೆ ಮನೆ ತಲುಪುವ, ಜನತೆಯ ಮನೆಯ ಬಾಗಿಲಿಗೆ ಬಂದು ಈ ರೀತಿಯ ಜನತೆಯ ಮತ್ತು ಸಮಾಜದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಮಂಗಳಾದೇವಿ ಮಾನ್ವಿ ಮಾತನಾಡಿ, ಮಹಿಳೆಯರಿಗಾಗಿಯೇ ಇನ್ನರ್ವ್ಹೀಲ್ ಕ್ಲಬ್ ವಿಶೇಷ ಕಾರ್ಯಕ್ರಮ ರೂಪಿಸಲು ಸಂಘಟಿಕರಿಗೆ ಸೂಚಿಸಿದರು. ಶಿಬಿರದಲ್ಲಿ ಎಲವು ಕೀಲು ತಜ್ಞ ಡಾ. ಜಗದೀಶ ಭೂಮರಡ್ಡಿ, ಸ್ತ್ರೀ ರೋಗ ತಜ್ಞೆ ಡಾ. ಅಂಜಲಿ ಭೂಮರಡ್ಡಿ, ಚಿಕ್ಕ ಮಕ್ಕಳ ತಜ್ಞ ಡಾ. ಎಸ್.ಎಫ್. ವರವಿ ಅವರು ಶಿಬಿರದಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ 500ಕ್ಕೂ ಹೆಚ್ಚಿನ ಜನತೆ ವೈದ್ಯಕೀಯ ತಪಾಸಣೆಗೆ ಒಳಗಾದರು. ಅಧ್ಯಕ್ಷತೆ ವಹಿಸಿದ್ದ ಇನ್ನರ್ವ್ಹೀಲ್ ಕ್ಲಬ್ನ ಅಧ್ಯಕ್ಷೆ ಅನ್ನಪೂರ್ಣ ಮಾತನಾಡಿದರು. ಗದಗ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕ ಪಿ.ಎ. ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಬಸಪ್ಪ ಇಂಗಳೇಶ್ವರ, ದುಂಡಪ್ಪ ಆಸಂಗಿ, ಶಾಂತಪ್ಪ ಮುಳವಾಡ, ರಮೇಶ ಅಣ್ಣಿಗೇರಿ, ಶಾಂತಪ್ಪ ಅಕ್ಕಿ, ಶೋಭಾ ಪಾಟೀಲ, ಶಾಂತಾ ಮುಂದಿನಮನಿ, ಹೇಮಲತಾ ಪೊಂಗಾಲಿಯಾ, ವಿದ್ಯಾ ಗಂಜಿಹಾಳ, ರೇಷ್ಮಾ ಬಸರಿಗಿಡದ, ವಿದ್ಯಾ ಸೂಡಿಶೆಟ್ಟರ್, ನಾಗರತ್ನ ಮಾರನಬಸರಿ, ಸುನಂದಾ ಮಾಳೆಕೊಪ್ಪಮಠ, ಗಂಗಮ್ಮ ಗಡಾದ, ವಾಸಂತಿ ಖಮಿತ್ಕರ್ ಮುಂತಾದವರು ಇದ್ದರು. ಮಂಗಲಾ ಅಬ್ಬಿಗೇರಿ ಪ್ರಾರ್ಥಿಸಿದರು. ಕವಿತಾ ದಂಡಿನ ನಿರೂಪಿಸಿದರು. ಪ್ರೇಮಾ ಮೇಟಿ ವಂದಿಸಿದರು.