ಅಕ್ರಮ ಕುಳಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ
ಗದಗ: ರಾಜ್ಯದ ಉಪಲೋಕಾಯುಕ್ತ ಎಸ್.ಬಿ. ಮಜ್ಜಗಿ ಬುಧವಾರ ಗದಗ-ಬೆಟಗೇರಿ ಅವಳಿ ನಗರದ ವಿವಿಧೆಡೆ ದಿಢೀರ್ ಭೇಟಿ ನೀಡಿ, ಕಾಮಗಾರಿಗಳು ಹಾಗೂ ಸಾರ್ವಜನಿಕರಿಂದ ಬಂದ ದೂರಿನನ್ವಯ ಪರಿಶೀಲನೆ ನಡೆಸಿದರು.
ಅಕ್ರಮಗಳಲ್ಲಿ ಭಾಗಿಯಾಗಿರುವವರಲ್ಲಿ ಇದು ನಡುಕ ಹುಟ್ಟಲು ಕಾರಣವಾಯಿತು. ಬೆಳಗ್ಗೆ ಬೆಟಗೇರಿಯ ಹೊರವಲಯದಲ್ಲಿನ ದೊಡ್ಡ ಚರಂಡಿಯನ್ನು ಪ್ರಭಾವಿ ವ್ಯಕ್ತಿಯೋರ್ವರು ಒತ್ತುವರಿ ಮಾಡಿಕೊಂಡಿರುವ ಕುರಿತು ಬಂದ ದೂರಿನ ಆಧಾರದಲ್ಲಿ ಪರಿಶೀಲನೆಗೆ ತೆರಳಿದ ಉಪಲೋಕಾಯುಕ್ತರು, ನಗರಸಭೆ, ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ತಪಾಸಣೆ ನಡೆಸಿದರು. ಪರಿಶೀಲನೆಯ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರಲ್ಲಿ ಕೆಲವರು ಚರಂಡಿ ಮುಚ್ಚಿದ್ದಾರೆ. ಇದರಿಂದ ನೀರು ಹರಿದು ಹೋಗಲು ಸಮಸ್ಯೆಯಾಗಿದೆ. ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರೆ, ಮತ್ತೆ ಕೆಲವರು ಅದನ್ನು ಮುಚ್ಚಿ ನೀರು ಒಂದೆಡೆ ಹೋಗುವಂತೆ ಮಾಡಿರುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಸಾರ್ವಜನಿಕರ ಮಾಹಿತಿ ಪಡೆದ ನಂತರ ಅಧಿಕಾರಿಗಳಿಗೆ ಸೂಚನೆ ನೀಡಿದ ಉಪಲೋಕಾಯುಕ್ತರು ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿ, ವರದಿ ನೀಡುವಂತೆ ಸೂಚಿಸಿದರು. ಅಲ್ಲಿಂದ ಟ್ಯಾಗೋರ್ ರಸ್ತೆಯಲ್ಲಿರುವ ಕೊಳಚೆ ನಿವಾಸಿಗಳನ್ನು ಭೇಟಿ ಮಾಡಿ ಅವರ ಅಹವಾಲು ಸ್ವೀಕರಿಸಿದರು. ಅವರಿಗಾಗಿಯೇ ಸರ್ಕಾರ ಮನೆಗಳನ್ನು ನಿರ್ಮಿಸಿದ್ದರೂ ಸ್ಥಳಾಂತರವಾಗದೇ ಇರುವ ಬಗ್ಗೆ ಅವರಿಂದ ಮಾಹಿತಿ ಪಡೆದರು. ಈ ಕುರಿತು ನಗರಸಭೆಯ ಅಧಿಕಾರಿಗಳು ಸಾರ್ವಜನಿಕರು ಹಾಗೂ ಕೊಳಚೆ ನಿವಾಸಿಗಳೊಂದಿಗೆ ಸಭೆ ನಡೆಸಿ, ವರದಿ ನೀಡುವಂತೆ ತಿಳಿಸಿದರು.
ಅಬಕಾರಿ ಅಧಿಕಾರಿಗಳು ತರಾಟೆಗೆ: ಈ ಸಂದರ್ಭದಲ್ಲಿ ಗದಗ ನಗರದ ಧಾರ್ಮಿಕ ಕೇಂದ್ರ ಹಾಗೂ ಶಿಕ್ಷಣ ಸಂಸ್ಥೆಗಳ ಸಮೀಪ ಇರುವ ಮದ್ಯದಂಗಡಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಈಗಾಗಲೇ ಸೂಚನೆ ನೀಡಿದ್ದರೂ ಜಿಲ್ಲಾ ಅಬಕಾರಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೇ ಇರುವುದನ್ನು ಗಮನಿಸಿದ ಉಪಲೋಕಾಯುಕ್ತರು, ಸ್ಥಳದಲ್ಲಿದ್ದ ಅಬಕಾರಿ ಅಧಿಕಾರಿಗಳಾದ ಮಲ್ಲಿಕಾರ್ಜುನ ರೆಡ್ಡಿ ಹಾಗೂ ಜನಾಯಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ನೀವೇನ್ರೀ ಕೆಲ್ಸಾ ಮಾಡ್ತೀರಾ, ಇದನ್ನೆಲ್ಲಾ ನೀವೆ ಹುಡುಕಿ ಮಾಡಬೇಕು. ಆದರೆ ಸೂಚನೆ ಕೊಟ್ರು ಮಾಡುದಿಲ್ಲವಲ್ರೀ...ಏನು ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ಕೂಡಲೇ ಧಾರ್ಮಿಕ ಸ್ಥಳ, ಶಾಲೆಗಳ ಸಮೀಪದಲ್ಲಿರುವ ಮದ್ಯದಂಗಡಿಗಳ ಮೇಲೆ (ಅಬಕಾರಿ ಕಾನೂನು ಪ್ರಕಾರ) ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಸೂಚಿಸಿದರು. ಪರಿಶೀಲನೆಯ ವೇಳೆಯಲ್ಲಿ ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ, ನಗರಸಭೆಯ ಅಭಿಯಂತರ ಎಲ್.ಜಿ. ಪತ್ತಾರ, ಗದಗ ತಹಸೀಲ್ದಾರ್ ಜಯಶ್ರೀ ಶಿಂತ್ರೆ ಸೇರಿದಂತೆ ಹಿರಿಯ, ಕಿರಿಯ ಅಧಿಕಾರಿಗಳು ಹಾಜರಿದ್ದರು.