ತುಂಗಭದ್ರೆಗೆ ಬಾಗಿನ ಅರ್ಪಣೆ
ಲಕ್ಷ್ಮೇಶ್ವರ: ಪಟ್ಟಣಕ್ಕೆ ನೀರು ಪೂರೈಸುತ್ತಿರುವ ಮೇವುಂಡಿ ಗ್ರಾಮದ ಜಾಕ್‌ವೆಲ್ ಹತ್ತಿರ ತುಂಗಭದ್ರಾ ನದಿಯು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪುರಸಭೆಯ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಸಿಬ್ಬಂದಿ ಮಂಗಳವಾರ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ ಮಾತನಾಡಿ, ಪಟ್ಟಣಕ್ಕೆ ಸತತವಾಗಿ ನೀರು ಪೂರೈಸುತ್ತಿರುವ ತುಂಗಭದ್ರಾ ನದಿಯು ಯಾವಗಲೂ ಹೀಗೆ ತುಂಬಿ ಹರಿಯುತ್ತಿರಲಿ. ನಮ್ಮ ಜನರು ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯಿಂದ ಬಾಳುವಂತಾಗಲಿ ಎಂದು ಆಶಿಸಿದರು. ನಂತರ ಸೂರಣಗಿ ಹತ್ತಿರ ಪಟ್ಟಣಕ್ಕೆ ನೀರನ್ನು ಶುದ್ಧೀಕರಣಗೊಳಿಸುತ್ತಿರುವ ಘಟಕಕ್ಕೆ ಭೇಟಿ ನೀಡಿದರು. ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಪುರಸಭೆಯ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಸದಸ್ಯ ಅನಿಲ ಮುಳಗುಂದ, ಗುರುರಾಜ ಮೆಡ್ಲೇರಿ, ಸೋಮಣ್ಣ ಸುತಾರ, ಶಂಕ್ರಮ್ಮ ಕರಡಿ ಹಾಗೂ ಸಿಬ್ಬಂದಿ ಹಾಜರಿದ್ದರು.