4 ಮಕ್ಕಳು ಕೆರೆ ಪಾಲು
ಗದಗ/ರಾಯಚೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ಬಾಲಕಿಯರು ಹಾಗೂ ಇಬ್ಬರು ಬಾಲಕರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಬಸವರಾಜ ಮಮ್ಮಿಗಟ್ಟಿ(11) ಹಾಗೂ ಚೆನ್ನಪ್ಪ ಸೊರಣಗಿ(9) ಮೃತಪಟ್ಟರೆ, ರಾಯಚೂರು ತಾಲೂಕಿನ ಮಿಟ್ಟಿ ಮಲ್ಕಾಪುರ ಗ್ರಾಮದಲ್ಲಿ ಬಾಲಕಿಯರಾದ ಮಹಿಮಾ(12), ಮರಿಯಮ್ಮ(14) ಕೆರೆ ಪಾಲಾಗಿದ್ದಾರೆ.
ಈಜಲು ಹೋಗಿದ್ದರು: ಹುಲುಕೋಟಿ ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ಬಾಲಕರಾದ ಬಸವರಾಜ್ ಮತ್ತು ಚೆನ್ನಪ್ಪ ಈಜಲು ಹೋಗಿದ್ದರು. ಆದರೆ, ಕಾಲು ಜಾರಿ ಕೆರೆ ಬಿದ್ದು, ನೀರಿನಿಂದ ಮೇಲಕ್ಕೆ ಬರಲಾಗದೆ ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಬಟ್ಟೆ ತೊಳೆಯಲು ಹೋಗಿದ್ದರು: ಮಿಟ್ಟಿ ಮಲ್ಕಾಪುರ ಗ್ರಾಮದ ಕೆರೆಗೆ ಅದೇ ಗ್ರಾಮದ ಮಹಿಮಾ, ಮರಿಯಮ್ಮ ಸೇರಿ ನಾಲ್ವರು ಬಟ್ಟೆ ತೊಳೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಮಹಿಮಾ, ಮರಿಯಮ್ಮ ಆಯ ತಪ್ಪಿ ನೀರಿನಲ್ಲಿ ಬಿದ್ದಿದ್ದಾರೆ. ಇವರನ್ನು ರಕ್ಷಿಸಲು ಮತ್ತಿಬ್ಬರು ನೀರಿಗೆ ಜಿಗಿದಿದ್ದಾರೆ. ಆದರೆ, ರಕ್ಷಿಸಲು ಹೋದ ಬಾಲಕಿಯರನ್ನು ಬಚಾವ್ ಮಾಡಲು ಮಾತ್ರ ಗ್ರಾಮಸ್ಥರಿಗೆ ಸಾಧ್ಯವಾಯಿತು. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.