ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಿ
ಗಜೇಂದ್ರಗಡ: ಪಕ್ಷಭೇದ ಮರೆತು, ಸರ್ವ ಸದಸ್ಯರ ವಿಶ್ವಾಸದೊಂದಿಗೆ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಂಡು ಮಾದರಿಯ ಆಡಳಿತ ನೀಡಿ ಜನತೆಯ ವಿಶ್ವಾಸಗಳಿಸಲು ಮುಂದಾಗಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಸ್ಥಳೀಯ ಪುರಸಭೆಯ ಸಭಾಭವನದಲ್ಲಿ ಗುರುವಾರ ನಡೆದ ಪುರಸಭೆಯ ಆಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಪಟ್ಟಣಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ಹಣ ಬಿಡುಗಡೆ ಮಾಡುತ್ತವೆ. ಅದನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರ ಪ್ರಾಮುಖ್ಯವಾಗಿದೆ ಎಂದರು. ಮುಖ್ಯಾಧಿಕಾರಿ ಮಹಾಂತೇಶ ಬೀಳಗಿಯವರು 2013-14ನೇ ಸಾಲಿಗೆ ಗಜೇಂದ್ರಗಡ ಪುರಸಭೆಗೆ ಸರ್ಕಾರದಿಂದ ಹಂಚಿಕೆಯಾದ ರು. 311.43 ಕೋಟಿ ಎಸ್.ಎಫ್.ಸಿ ಅನುದಾನದ ಕ್ರೀಯಾ ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಿದರು. ಪುರಸಭೆ ಸದಸ್ಯರು ತಮ್ಮ ತಮ್ಮ ವಾರ್ಡ್ಗಳಲ್ಲಿನ ಮೂಲ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಅಲ್ಲದೆ ಪುರಸಭೆಯಲ್ಲಿ 6 ವರ್ಷದಿಂದ ಕಾಯಂ ಅಭಿಯಂತರ ಇಲ್ಲದೇ ಆಡಳಿತಕ್ಕೆ ತೊಂದರೆಯಾಗಿದೆ. ಕೂಡಲೇ ಪುರಸಭೆಗೆ ಕಾಯಂ ಅಭಿಯಂತರ ನೇಮಕ ಮಾಡಲು ನಗರಾಡಳಿತ ಇಲಾಖೆಗೆ ಒತ್ತಾಯಿಸಿದರು. ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದಲ್ಲದೆ, ಜನತೆಯ ಭಾವನೆಗೆ ತಕ್ಕಂತೆ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ ಹಾಗೂ ಎಲ್ಲ ಸದಸ್ಯರು ಹಾಜರಿದ್ದರು. ಪುರಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ಕಾಂಗ್ರೆಸ್ ಸದಸ್ಯ ಶಿವರಾಜ ಘೋರ್ಪಡೆ ಹೆಸರನ್ನು ಸದಸ್ಯರು ಅಂತಿಮಗೊಳಿಸಿದರು.
ಶಾಸಕ ಪಾಟೀಲ್ರಿಂದ ಅಧಿಕಾರಿಗಳ ತರಾಟೆ
ನೂತನವಾಗಿ ಅಸ್ತಿತ್ವಕ್ಕೆ ಬಂದ ಪುರಸಭೆ ಆಡಳಿತ ಮಂಡಳಿ ಸದಸ್ಯರು ಸಭೆಯಲ್ಲಿ ಸತತ 6 ಗಂಟೆಗೂ ಹೆಚ್ಚುಕಾಲ ಸಭೆ ನಡೆಸಿ, ಪಟ್ಟಣದ ಅಭಿವೃದ್ಧಿಗೆ ಪೂರಕವಾಗುವಂತಹ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು. ಸಭೆ ನಿಗದಿಯಂತೆ ಬೆಳಗ್ಗೆ 10.30ಕ್ಕೆ ಸರಿಯಾಗಿ ಆರಂಭಗೊಂಡಿತು. ಸಭೆಗೆ ಅಧ್ಯಕ್ಷ, ಉಪಾಧ್ಯಕ್ಷೆ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಕಾಂಗ್ರೆಸ್ನ ಯಾವೊಬ್ಬ ಸದಸ್ಯರೂ ಸಭೆಯಲ್ಲಿರಲಿಲ್ಲ. ಇದನ್ನು ಗಮನಿಸದೇ ಅಧಿಕಾರಿಗಳು ಸಭೆ ಆರಂಭಿಸಿಯೇ ಬಿಟ್ಟರು. ಬಳಿಕ ಶಾಸಕ ಜಿ.ಎಸ್. ಪಾಟೀಲ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸಭೆಗೆ ಆಗಮಿಸಿದರು. ಅಷ್ಟೊತ್ತಿಗಾಗಲೇ ಸಭೆ ಆರಂಭಗೊಂಡಿದ್ದನ್ನು ಗಮನಿಸಿದ ಶಾಸಕ ಜಿ.ಎಸ್. ಪಾಟೀಲರು ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಸದೇ ಏಕಪಕ್ಷೀಯವಾಗಿ ಆಡಳಿತ ನಡೆಸಲು ಮುಂದಾಗಿದ್ದಿರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಇದೀಗ ಸಭೆ ಆರಂಭಗೊಂಡಿದೆ ಎಂದು ಸಬೂಬು ಹೇಳಿದ್ದು, ವಿರೋಧ ಪಕ್ಷದವರನ್ನು ಕೆರಳಿಸುವಂತೆ ಮಾಡಿತು.
--