ಯೋಗ ಭಾರತೀಯರಲ್ಲಿ ರಕ್ತಗತ
ಗದಗ: ಯೋಗ ವಿದ್ಯೆ ಭಾರತೀಯರಲ್ಲಿ ರಕ್ತಗತವಾಗಿ ಬಂದಿದೆ. ಆದರೆ, ಮನುಷ್ಯ ಒತ್ತಡದ ಬದುಕಿನಲ್ಲಿ ಅದನ್ನು ಮರೆತಿದ್ದಾನೆ. ಮನಸ್ಸಿನ ಚಾಂಚಲ್ಯತೆ ನಿಗ್ರಹಿಸಿಕೊಂಡಾಗ ಮಾತ್ರ ಯೋಗ ವಿದ್ಯೆ ಪ್ರಾಪ್ತಿಯಾಗಲು ಸಾಧ್ಯವಾಗುತ್ತದೆ ಎಂದು ಹೊಸಳ್ಳಿಯ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.
ಅವರು ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಗದಗ-ಬೆಟಗೇರಿ ಶಾಖೆ ವತಿಯಿಂದ ಗುರುವಾರ ನಡೆದ 4 ದಿನಗಳ ಜಿಲ್ಲಾ ಪ್ರಾಥಮಿಕ ಪ್ರ-ಶಿಕ್ಷಣ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇಂದು ಯೋಗವನ್ನು ಪಾಶ್ಚಿಮಾತ್ಯರು ಕರಗತ ಮಾಡಿಕೊಂಡು ಭಾರತೀಯರಿಗೆ ತರಬೇತಿ ನೀಡುವಷ್ಟು ಜ್ಞಾನ ಸಂಪಾದಿಸಿಕೊಂಡಿದ್ದಾರೆ. ಸಂದಿಗ್ಧತೆಯಲ್ಲಿ ಬದುಕುತ್ತಿರುವ ಮನುಷ್ಯ ಶಾಂತಿ, ಸಹನೆ ಕಳೆದುಕೊಂಡಿದ್ದಾನೆ. ಆದರೆ, ಈಗ ನಮಗಿರುವ ಪರಿಸ್ಥಿತಿ ನಮ್ಮ ಪೂರ್ವಜರಿಗೆ ಇರಲಿಲ್ಲ. ಹಾಗಾಗಿ ನಾವುಗಳು ಇಂದು ಸ್ವಯಂಕೃತ ಅಪರಾಧ ಮಾಡುತ್ತಿದ್ದೇವೆ.
ಶ್ರಮದ ಬದುಕು ಯಾರಿಗೂ ಬೇಡವಾಗಿದೆ. ಹಾಗಾಗಿ ಬದುಕನ್ನು ಗೊಂದಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ನಮಗೆ ಸ್ಪಷ್ಟ ತಿಳಿವಳಿಕೆ ಇದ್ದರೂ ನಾವು ಅದನ್ನೇ ಮಾಡುತ್ತೇವೆ. ಹಾಗಾಗಿ ಮನಸ್ಸಿನ ನಿಗ್ರಹಕ್ಕಾಗಿ ಪ್ರತಿಯೊಬ್ಬರಿಗೂ ಯೋಗ, ಧ್ಯಾನದ ಅವಶ್ಯಕತೆಯಿದೆ. ಇಂತಹ ಶಿಬಿರಗಳ ಮೂಲಕ ಯೋಗ ವಿದ್ಯೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರು. ಧಾರವಾಡದ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ಪ್ರಸನ್ನ ದಿಕ್ಷೀತ ಮಾತನಾಡಿ, ಜನರು ಆರೋಗ್ಯ ಕೆಟ್ಟ ಮೇಲೆಯೇ ಯೋಗದ ಕಡೆ ಬಾರದೇ, ನಿತ್ಯ ಯೋಗ ಅಭ್ಯಾಸವನ್ನು ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಡಾ. ಅನಂತ ಶಿವಪುರ ಮಾತನಾಡಿದರು. ಮಲ್ಲಮ್ಮ ಗೊಜನೂರ, ಬಸಣ್ಣ ಮಲ್ಲಾಡದ, ಚಂದ್ರು ಬಾಳಿಹಳ್ಳಿಮಠ ಯೋಗದ ಅವಶ್ಯಕತೆಯ ಕುರಿತು ಮಾತನಾಡಿದರು. ಕೆ.ಆರ್. ಗುಡುಹಾಳ, ಅಂದಾನಪ್ಪ ಪಟ್ಟಣಶೆಟ್ಟರ, ವಿಜಯಕುಮಾರ ಬಾಳಿಹಳ್ಳಿಮಠ ಮುಂತಾದವರು ಉಪಸ್ಥಿತರಿದ್ದರು. ರವಿ ಪಾಟೀಲ ಸ್ವಾಗತಿಸಿದರು. ಗುಡಿಹಾಳ ವಂದಿಸಿದರು.