ಅಕ್ರಮ ಮರಳು ಸಾಗಾಟಕ್ಕೆ ಅವಕಾಶವಿಲ್ಲ
ಕನ್ನಡಪ್ರಭ ವಾರ್ತೆ, ಗದಗ, ಸೆ. 27
ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ಭಾಗಗಳಲ್ಲಿ ಅಕ್ರಮ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಅಲ್ಲದೇ, ಈಗಾಗಲೇ ಖುದ್ದು ಪರಿಶೀಲನೆ ನಡೆಸಿ, ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಇನ್ನುಮುಂದೆ ಅಕ್ರಮ ಮರಳು ಸಾಗಾಟ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ಹೇಳಿದರು.
ಅವರು ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜರುಗಿದ ಅಕ್ರಮ ಮರಳು ನೀತಿ ನಿಯಂತ್ರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನದಿಯಲ್ಲಿ ಮರಳು ತೆಗೆಯಲು ಬೋಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೇ ನದಿಯ ತಟದಲ್ಲಿ ಮರಳಿಗಾಗಿ ಜೆಸಿಬಿ ಸೇರಿದಂತೆ ಇನ್ನಿತರ ವಾಹನಗಳು ನಿಂತಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು. ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ಮರಳು ನೀಡಲು ಲೋಕೋಪಯೋಗಿ ಇಲಾಖೆ ಸಜ್ಜಾಗಿದೆ. ಲೋಕೋಪಯೋಗಿ ಇಲಾಖೆ ಸ್ಟಾಕ್‌ಯಾರ್ಡ್‌ನಲ್ಲಿ ಹಾಕುವ ಮರಳನ್ನೇ ಪಡೆದು ಬಳಸಿಕೊಳ್ಳಬೇಕು.
ಮರಳು ಸಾಗಾಟ ಮಾಡುವ ಸಂದರ್ಭದಲ್ಲಿ ಸಾಗಾಟದ ವಾಹನಕ್ಕೆ ಕಡ್ಡಾಯವಾಗಿ ಜಿ.ಪಿ.ಆರ್.ಎಸ್. ಅಳವಡಿಸಬೇಕು. ಲಾರಿಗಳ ಮುಂಭಾಗ ಬಿಳಿ ಮತ್ತು ಹಿಂಭಾಗದಲ್ಲಿ ಹಳದಿ ಬಣ್ಣ ಬಳಿದಿರಬೇಕು. ನಿಗದಿತ ವೇಳೆಯಲ್ಲಿಯೇ ಸಂಚರಿಸಬೇಕು. ಆರ್‌ಟಿಓ ಅನುಮತಿ ಕಡ್ಡಾಯ. ಮರಳು ಪಡೆಯಲು ಪಾಸ್ ಪಡೆಯಬೇಕು. ಪಾಸ್‌ನಲ್ಲಿ ಮರಳು ಪಡೆಯುವರ ವಿವರ ಕಡ್ಡಾಯವಾಗಿರಬೇಕು ಮತ್ತು ಲಾರಿ ಸಂಚರಿಸುವ ಮಾರ್ಗ ನಮೂದಿಸಿರಬೇಕು. ಸ್ಟಾಕ್‌ಯಾರ್ಡ್‌ನಲ್ಲಿರುವ ಮರಳಿನ ಗುಣಮಟ್ಟದ ಆಧಾರದ ಮೇಲೆ ಸುಂಕ ನಿಗದಿಪಡಿಸುವುದು ಸೇರಿದಂತೆ ಇನ್ನಿತರ ವಿಷಯಗಳು ಕುರಿತು ಶೀಘ್ರದಲ್ಲಿಯೇ ಚರ್ಚಿಸಿ ಕ್ರಮ ಕೈಗೊಂಡು ಮರಳು ಸಾಗಾಟಕ್ಕೆ ಚಾಲನೆ ನೀಡಲಾಗುವುದು.
ಇನ್ನು ಮುಂದೇ ಸ್ಟಾಕ್‌ಯಾರ್ಡ್‌ಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಟಾಕ್‌ಯಾರ್ಡ್‌ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ, ಲೋಕೋಪಯೋಗಿ ಸಿಬ್ಬಂದಿ, ಹೋಮಗಾರ್ಡ್ಸ್ ನಿಯೋಜಿಸಲಾಗುವುದು. ಪಟ್ಟಾ ಭೂಮಿಯಲ್ಲಿ ಮರಳು ತೆಗೆದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಎಸ್‌ಪಿ ಡಾ. ಎಸ್.ಡಿ. ಶರಣಪ್ಪ, ಸಿಇಒ ವೀರಣ್ಣ ತುರಮುರಿ, ಎಸಿ ಐ.ಜಿ. ಗದ್ಯಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.