ಅವ್ಯವಸ್ಥೆ: ತಹಸೀಲ್ದಾರ್ ಮೇಲೆ ಮಜ್ಜಗಿ ಕಿಡಿ
ಕನ್ನಡಪ್ರಭ ವಾರ್ತೆ, ರೋಣ, ಸೆ. 27
ಸಾರ್ವಜನಿಕರ ಕುಂದುಕೊರತೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಗೆ ಆಗಮಿಸಿದ ರಾಜ್ಯ ಉಪ ಲೋಕಾಯುಕ್ತ ಅಧಿಕಾರಿ ಎಸ್.ಬಿ. ಮಜ್ಜಗಿ ಅವರು ಗುರುವಾರ ಸಂಜೆ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಅಸ್ವಚ್ಛತೆ ಮತ್ತು ಅವ್ಯವಸ್ಥೆ ಕಂಡು ತಹಸೀಲ್ದಾರ್ ಸೇರಿದಂತೆ ಕಚೇರಿ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಅರ್ಜಿ ವಿಲೇವಾರಿ ಮತ್ತು ಸ್ವೀಕಾರ ವಿಭಾಗಕ್ಕೆ ಭೇಟಿ ನೀಡಿ, ಸುಮಾರು 23 ಪ್ರಕರಣಗಳು ವಿಲೇವಾರಿಯಾಗಿಲ್ಲ, ವಿಲೇವಾರಿಯಾದ ಕೆಲ ಪ್ರಕರಣಗಳ ಕುರಿತು ಸರಿಯಾದ ದಾಖಲೆಯನ್ನು ಏಕೆ ಇಟ್ಟಿಲ್ಲ. ಈ ರೀತಿ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕೂಡಲೇ ಇದನ್ನು ಸರಿಪಡಿಸಿಕೊಳ್ಳಬೇಕು ಎಂದ ಅವರು, ಭೂಮಿ ಕೇಂದ್ರ, ಗಣಕ ಯಂತ್ರ ವಿಭಾಗಕ್ಕೆ, ಶಿರಸ್ತೇದಾರ್ ಕಾರ್ಯಾಲಯಗಳಿಗೆ ಭೇಟಿ ನೀಡಿ ಕೆಲವು ಕಡತಗಳನ್ನ ಪರಿಶೀಲಿಸಿದರು. ಕೆಲವೊಂದು ಕಡತಗಳ ಸರಿಯಿಲ್ಲದಿರುವುದನ್ನು ಕಂಡು ಸಂಬಂಧಪಟ್ಟವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮೂಗು ಮುಚ್ಚಿಕೊಂಡ ಲೋಕಾಯುಕ್ತರು: ಕಚೇರಿಯಲ್ಲಿನ ವಿವಿಧ ವಿಭಾಗಕ್ಕೆ ಭೇಟಿ ನೀಡುತ್ತಿದ್ದಾಗ ಅಸ್ವಚ್ಛತೆಯಿಂದ ಶೌಚಾಲಯದಿಂದ ಬರುತ್ತಿರುವ ದುರ್ನಾತದಿಂದ ಮೂಗು ಮುಚ್ಚಿಕೊಂಡು, ಏನಿದು ವಾಸನೆ ನಿಮ್ಮ ಮನೆಯಲ್ಲಿ ಈ ರೀತಿಯಾಗಿದ್ದರೆ ಸುಮ್ಮನೆ ಇರುತ್ತಿದ್ದೀರಾ? ಈ ರೀತಿ ಇರುವುದರಿಂದಲೇ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇಷ್ಟು ಗಲೀಜಿನಲ್ಲಿ ಹೇಗೆ ಕೆಲಸ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಶೌಚಾಲಯವನ್ನು ಸ್ವಚ್ಛತೆಯಿಂದಿಡಬೇಕು. ಕಚೇರಿಯ ಸಿಬ್ಬಂದಿ ಕಾರ್ಯ ವೈಖರಿ ಮತ್ತು ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ತಹಸೀಲ್ದಾರ್ ಕಾರ್ಯ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸ್ಥಳದಲ್ಲಿದ್ದ ತಹಸೀಲ್ದಾರ್ ಎ.ಬಿ. ಪಂಡಿತ ಅವರಿಗೆ ಆದೇಶಿಸಿದರು.
ಕರ್ತವ್ಯದಲ್ಲಿ ನಿಷ್ಠೆಯಿರಲಿ: ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುವ ದಿಸೆಯಲ್ಲಿ ಸರ್ಕಾರಿ ಅಧಿಕಾರಿಗಳ ಕಾರ್ಯ ಪ್ರಮುಖವಾಗಿದೆ. ಅರ್ಜಿಗಳನ್ನು ನಿಗದಿತ ಅವಧಿಗೆ ವಿಲೇವಾರಿ ಮಾಡಬೇಕು. ಕುಂಟು ನೆಪ ಹೇಳಿ ವಿಳಂಬ ಮಾಡಕೂಡದು. ಅಂತಹದೇನಾದರೂ ಕಂಡು ಬಂದಲ್ಲಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವದು. ಕರ್ತವ್ಯದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿರಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಲೋಕಾಯುಕ್ತ ಎಸ್.ಪಿ. ಕೆ.ಪರಶುರಾಮ, ಲೋಕಾಯುಕ್ತ ಸಿಪಿಐ ಸಂಗನಗೌಡ್ರ, ರೋಣ ಪಿಎಸ್ಐ ಡಿ.ಬಿ.ಪಾಟೀಲ, ತಹಸೀಲ್ದಾರ್ ಎ.ಬಿ. ಪಂಡಿತ ಉಪಸ್ಥಿತರಿದ್ದರು.