ಕ್ಷೌರಿಕ ಸಮುದಾಯ ಪ್ರವರ್ಗ 1ಕ್ಕೆ ಸೇರಿಸಿ
ಗದಗ: ಹಲವು ದಶಕಗಳಿಂದ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಕ್ಷೌರಿಕ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಬೇಕೆಂದು ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ, ಜಿಲ್ಲಾ ಉಪಾಧ್ಯಕ್ಷರಾದ ಪಾಂಡು ಕಾಳೆ ಒತ್ತಾಯಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ಷೌರಿಕ ಸಮಾಜ ಕಳೆದ ಹಲವು ವರ್ಷಗಳಿಂದಲೂ ಆರ್ಥಿಕವಾಗಿ ತೀರಾ ಸಂಕಷ್ಟವನ್ನು ಅನುಭವಿಸುತ್ತಿದೆ. ಮುಂಬರುವ ದಿನಗಳಲ್ಲಾದರೂ ನಿಗಮ ಮಂಡಳಿ, ನಗರಸಭೆ, ಮಹಾನಗರ ಪಾಲಿಕೆಗಳಿಗೆ ನಾಮಕರಣ ಸದಸ್ಯರನ್ನು ನೇಮಿಸುವಾಗ ರಾಜಕೀಯವಾಗಿ ಅತಿ ಹಿಂದುಳಿದಿರುವ ಕ್ಷೌರಿಕ ಸಮುದಾಯಕ್ಕೆ ಕನಿಷ್ಠ ಪಕ್ಷ ಇಬ್ಬರು ಸದಸ್ಯರಿಗೆ ಅರ್ಹತೆಯ ಮೇಲೆ ಪ್ರಾತಿನಿಧ್ಯ ನೀಡಬೇಕು. ಸ್ವಾತಂತ್ರ್ಯ ಬಂದು 66 ವರ್ಷಗಳ ನಂತರವೂ ರಾಜಕೀಯ ಅಧಿಕಾರ ಪಡೆಯದೇ ಇರುವ ಏಕೈಕ ಸಮುದಾಯ ಕ್ಷೌರಿಕ ಸಮಾಜ ಮಾತ್ರ. ಅತ್ಯಂತ ಹಿಂದುಳಿದ ಕ್ಷೌರಿಕ ಸಮಾಜದ ಏಳ್ಗೆಗೆ ಅನುಕೂಲವಾಗುವಂತೆ ಕ್ಷೌರಿಕ ಸಮುದಾಯವನ್ನು ಈಗಿರುವ 2ನೇ ಗುಂಪಿನಿಂದ ಪ್ರವರ್ಗ 1ಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಸ್ವಾತಂತ್ರ್ಯ ಸೇನಾನಿ ಭಗತಸಿಂಗ್ ಜಯಂತಿ
ಗದಗ: ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೆ. 28ರ ಬೆಳಗ್ಗೆ 9ಕ್ಕೆ ಸ್ವಾತಂತ್ರ್ಯ ಸೇನಾನಿ ಭಗತಸಿಂಗ್ರ ಜಯಂತಿಯನ್ನು ಆಚರಿಸಲಾಗುತ್ತಿದೆ. ಅತಿಥಿಗಳಾಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಪ್ರಾ. ವೈ.ಆರ್. ಹಿರೇಗೌಡರ ವಹಿಸುವರು ಎಂದು ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಕಬಡ್ಡಿ: ಜಿಲ್ಲಾಮಟ್ಟಕ್ಕೆ ಆಯ್ಕೆ
ನರಗುಂದ: ತಾಲೂಕಿನ ಸುರಕೋಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕ್ರೀಡಾಪಟುಗಳು ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ಕ್ರೀಡೆಗಳಲ್ಲಿ ಶರಣಪ್ಪ ರಂಗಣ್ಣವರ 1500 ಮೀ. ಓಟದಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ, 800 ಮೀ. ಓಟದಲ್ಲಿ ಸುಭಾಸ ಗಾಣಿಗೇರ ದ್ವಿತೀಯ, 3000 ಮೀ. ಓಟದಲ್ಲಿ ಶಿವಾನಂದ ಸುಗ್ಗಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅಂದಪ್ಪ ನಿಧನ
ಮುಂಡರಗಿ: ಸ್ಥಳೀಯ ಪುರಸಭೆ ನಿವೃತ್ತ ನೌಕರ ಹಾಗೂ ತಾಲೂಕು ಕುರುಹಿನ ಶೆಟ್ಟಿ ಸಮಾಜದ ಹಿರಿಯ ಮುಖಂಡ ಅಂದಪ್ಪ ಬೇವಿನಮರದ (89) ಗುರುವಾರ ರಾತ್ರಿ ನಿಧನರಾದರು. ಮೃತರಿಗೆ ಓರ್ವ ಪುತ್ರ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗ ಇದ್ದರು.
ಸಂತಾಪ: ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು, ಶಾಸಕ ರಾಮಕೃಷ್ಣ ದೊಡ್ಡಮನಿ, ಎ.ಕೆ. ಬೆಲ್ಲದ, ತಾಲೂಕು ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ನಾಗಪ್ಪ ಶೇಡದ, ಬಿ.ವಿ. ಮುದ್ದಿ, ದೇವಪ್ಪ ರಾಮೇನಹಳ್ಳಿ, ಡಿ.ಜಿ. ಹಿರೇಮಠ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಕ.ರಾ. ಬೆಲ್ಲದ ಕಾಲೇಜು ಪ್ರಾಚಾರ್ಯ ಡಾ. ಎಂ.ಬಿ. ಬೆಳವಟಗಿಮಠ ಹಾಗೂ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.