ಗ್ರಾಮೀಣ ವ್ಯವಸ್ಥೆ ಪರಿವರ್ತನೆಗೆ ಸಂಕಲ್ಪ
ಗದಗ: ಸಾಮಾಜಿಕ ನ್ಯಾಯದ ಹರಿಕಾರ ದಿ. ದೇವರಾಜ ಅರಸು ಅವರ ಸಾಮಾಜಿಕ ಚಿಂತನೆಗಳ ಸಮರ್ಪಕ ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಸರ್ಕಾರ ಸಂಕಲ್ಪ ಮಾಡಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ನಗರದ ಕನಕ ಭವನದಲ್ಲಿ ಶುಕ್ರವಾರ ಕಾಳಿದಾಸ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಸಿಎಂ ಡಿ. ದೇವರಾಜ ಅರಸು ಅವರ 98ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಪಾರಿತೋಷಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರನ್ನು ಸ್ವಾವಲಂಬಿಗಳಾಗಿಸಿ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ವ್ಯಸನಮುಕ್ತ, ಋಣಮುಕ್ತ, ವ್ಯಾಜ್ಯಮುಕ್ತ ಹಾಗೂ ತ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸರ್ಕಾರ ಪ್ರಥಮ ಆದ್ಯತೆ ನೀಡುತ್ತಿದೆ. ಬಡಜನತೆಯ ಬದುಕಿನಲ್ಲಿ ದಿ. ಅರಸು ಅವರು ಹುಟ್ಟುಹಾಕಿದ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೆಚ್ಚಿನ ಪ್ರಾಮುಖ್ಯ ನೀಡಿದ್ದು, ಈಗಾಗಲೇ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಹಾಗೂ ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಸಮುದಾಯಗಳ ಯುವಜನತೆ ವಿವಿಧ ನಿಗಮಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಲಾಗಿದೆ.
ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಆಹಾರ ಸಂಸ್ಕೃತಿಯನ್ನು ಉಳಿಸಿ ಜೋಳ ಬೆಳೆಯುವ ರೈತನಲ್ಲಿ ಆರ್ಥಿಕ ಶಕ್ತಿ ಕಲ್ಪಿಸಲು 1 ರು. ಗೆ ಕೆ.ಜಿ. ಜೋಳ ವಿತರಿಸುವ ಕಾರ್ಯ ಶೀಘ್ರ ಪ್ರಾರಂಭಿಸಲಾಗುವುದು. ಇದೇ ರೀತಿ ಪ್ರದೇಶವಾರು ಆಹಾರ ಪದ್ಧತಿಗೆ ಸರ್ಕಾರ ಪ್ರಾಮುಖ್ಯ ನೀಡಿದ್ದು, ದಿ. ದೇವರಾಜ ಅರಸು ಅವರ ಚಿಂತನೆಗಳನ್ನು ಕಾರ್ಯಕ್ರಮಗಳನ್ನಾಗಿ ಭಾಷಾಂತರಿಸಲು ಸರ್ಕಾರ ಬದ್ಧವಾಗಿದೆ. ಸಮಾಜದಲ್ಲಿ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಜನತೆಗೆ ತಲುಪಿಸುವ ಕಾರ್ಯವಾಗಬೇಕಿದೆ. ಹಿಂದುಳಿದ ಸಮಾಜದ ಸಂಘಟನೆಗಳು ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಿ ಎಂದರು.
ಪ್ರಾ. ಕೆ.ಬಿ. ತಳಗೇರಿ ವಿಶೇಷ ಉಪನ್ಯಾಸ ನೀಡಿದರು. ವಿ.ವೈ. ಮಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರೋಣ ಶಾಸಕ ಜಿ.ಎಸ್.ಪಾಟೀಲ, ನರಗುಂದ ಶಾಸಕ ಬಿ.ಆರ್.ಯಾವಗಲ್ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಸ್.ಎನ್. ಪಾಟೀಲ, ಡಾ. ಬಿ.ಎಫ್. ದಂಡಿನ, ಜಿಪಂ ಸದಸ್ಯ ಆರ್.ಡಿ. ಕೊಂಡಿಕೊಪ್ಪ, ಕುರುಬರ ಬ್ಯಾಂಕ್ ಅಧ್ಯಕ್ಷ ವಾಸಣ್ಣ ಕುರಡಗಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ರಾಮಣ್ಣ ಹೂವಣ್ಣವರ, ನಗರಸಭೆ ಸದಸ್ಯ ಅನಿಲ ಶಿಂಗ್ಟಾಲಕೇರಿ, ಬಿಂಕದಕಟ್ಟಿ ಆಯಿಲ್ಮಿಲ್ ಚೇರ್ಮನ್ ಎಫ್.ಎಚ್.ಅಗಸಿಮನಿ, ಜಯದೇವ ಮೆಣಸಗಿ ಪಾಲ್ಗೊಂಡಿದ್ದರು. ಕಾಳಿದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ವೈ.ಬಿ. ಭಾನಾಪುರ ಸ್ವಾಗತಿಸಿದರು. ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕೆ.ಎನ್. ಮಲ್ಲಾಪುರ, ಜಿ.ಎಲ್. ಕುರಿ ನಿರೂಪಿಸಿದರು. ಡಾ. ಡಿ.ಸಿ.ಗಡ್ಡಿ ವಂದಿಸಿದರು.