ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಳಕೆ ಮುನ್ನ ಸೋರುತ್ತಿದೆ ಟ್ಯಾಂಕ್

Rashmi Kasaragodu
Updated On : 29 Sept 2013, 1:07 am

 ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಮಣ್ಣು ಮಿಶ್ರಿತ ಉಸುಕು, ಕಳಪೆ ಗುಣಮಟ್ಟದ ಸಿಮೆಂಟ್ ಬಳಕೆ ಮಾಡಿ 1 ಲಕ್ಷ 25 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರು ಪೂರೈಸುವ ಟ್ಯಾಂಕ್ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಬಳಕೆಗೆ ಮುನ್ನವೇ ಸೋರುತ್ತಿದೆ.
ಸುಮಾರು 5 ಸಾವಿರ ಜನಸಂಖ್ಯೆ ಇರುವ ತಾಲೂಕಿನ ರಣತೂರ ಗ್ರಾಮದಲ್ಲಿ ಗ್ರೀನ್ ಇನ್ಫ್ರಾಪ್ರಾಜೆಕ್ಟ್ ಕಂಪನಿ ಬೆಂಗಳೂರು ಇವರು ಜಲನಿರ್ಮಲ ಯೋಜನೆಯಡಿ ತುಂಗಭದ್ರಾ ನದಿ ನೀರನ್ನು ಸಂಗ್ರಹಿಸಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಟ್ಯಾಂಕ್ ಕಾಮಗಾರಿ ಪ್ರಾರಂಭಿಸಿದ್ದು, ಯೋಜನೆಯಂತೆ ಕಾಮಗಾರಿ ನಡೆಯದೇ ಎಲ್ಲ ಹಂತದಲ್ಲಿಯೂ ಕಳಪೆ ಕಾಮಗಾರಿಯಾಗಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಗ್ರಾಮಸ್ಥರಿಂದ ರು. 1 ಲಕ್ಷ : ಗ್ರಾಮಸ್ಥರು ಈ ಕಾಮಗಾರಿಗೆ ರು. 1 ಲಕ್ಷ ವಂತಿಗೆ ಹಣ ಸಂಗ್ರಹ ಮಾಡಿ ಕೊಟ್ಟಿದ್ದು, ಗ್ರಾಮ ಪಂಚಾಯಿತಿ ಗಮನಕ್ಕಾಗಲಿ, ಜಲನಿರ್ಮಲ ಸಮಿತಿ ಸದಸ್ಯರ ಗಮನಕ್ಕೂ ತರದೇ ಮನಸೋ ಇಚ್ಛೆ ಕಾಮಗಾರಿ ನಡೆದಿದೆ. ಕಾಮಗಾರಿಗೆ ತಗಲುವ ವೆಚ್ಚ, ಮುಗಿಯುವ ಅವಧಿ, ಗುಣಮಟ್ಟ ಮುಂತಾದ ಮಾಹಿತಿಯ ನಾಮ ಫಲಕವನ್ನು ಕಾಮಗಾರಿ ನಡೆದ ಸ್ಥಳದಲ್ಲಿ ಅಳವಡಿಸಿಲ್ಲ. ಇದರ ಬಗ್ಗೆ ಸಂಬಂಧಿಸಿದವರನ್ನು ಮಾಹಿತಿ ಕೇಳಿದರೆ ಬರೀ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬರುತ್ತಿದೆ.
ಗ್ರಾಮದಲ್ಲಿ ಅತ್ಯಂತ ಹಳೆಯದಾದ ನೀರಿನ ಟ್ಯಾಂಕ್ ಇದೆ. ಇದರಿಂದಲೇ ಗ್ರಾಮ ಪಂಚಾಯಿತಿಯವರು ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಸುತ್ತಿದ್ದು, ಸುಮಾರು 20 ವರ್ಷಗಳಿಂದ ಈ ಟ್ಯಾಂಕ್ ಬಳಸದೇ (ಸ್ವಚ್ಛಗೊಳಿಸದೇ) ಇರುವುದರಿಂದ ಸಂಪೂರ್ಣ ಪಾಚಿಗಟ್ಟಿದ ನೀರು ಸಂಗ್ರಹವಾಗಿದೆ. ಇದೇ ನೀರನ್ನು ಪೂರೈಸುತ್ತಿದ್ದಾರೆ. ಟ್ಯಾಂಕ್ ಸ್ವಚ್ಛಗೊಳಿಸಲು ಸಾಕಷ್ಟು ಬಾರಿ ಹಣ ತೆಗೆದಿದ್ದು, ಜನತೆಗೆ ಮಾತ್ರ ಅಶುದ್ಧ ನೀರನ್ನೇ ಸರಬರಾಜು ಮಾಡುತ್ತಿದ್ದಾರೆ ಎಂದು ಗ್ರಾಮದ ಫಕೀರೇಶ ಕಟಗಿ ಆರೋಪಿಸುತ್ತಾರೆ.
ಕಾಂಕ್ರೀಟ್ ರಸ್ತೆ ಕಾಮಗಾರಿ: ಗ್ರಾಪಂ ವತಿಯಿಂದ ಗ್ರಾಮದ ಭರಮಪ್ಪನ ಗುಡಿ ಓಣಿಯಲ್ಲಿ ರು. 3 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಸಂಪೂರ್ಣ ಕಿತ್ತು ಹೋಗಿದೆ. ಓಣಿಯಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳಿಂದ ಜನ ಬಳಲುತ್ತಿದ್ದಾರೆ. ಗ್ರಾಮದಲ್ಲಿ ಗಟಾರ್, ಸಾರ್ವಜನಿಕ ಶೌಚಾಲಯ ಇಲ್ಲದೇ ಜನತೆ ರಸ್ತೆ ಅಕ್ಕಪಕ್ಕದಲ್ಲಿಯೇ ಬಹಿರ್ದೆಸೆಗೆ ಹೋಗುತ್ತಿದ್ದು, ದುರ್ವಾಸನೆ ಹೆಚ್ಚಿದೆ.
ಗ್ರಾಪಂ ಉಪಾಧ್ಯಕ್ಷರ ಬೇಸರ: ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಗ್ರಾಮಕ್ಕೆ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಗ್ರಾಮದಲ್ಲಿನ ಸಮಸ್ಯೆ ಕುರಿತು ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆದರೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸರ್ಕಾರದ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿಲ್ಲ. ಜನತೆ ನಮ್ಮ ಮೇಲೆ ಹರಿಹಾಯುತ್ತಿದ್ದಾರೆ ಎಂದು ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ ಪೂಜಾರ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಸೂಕ್ತ ಕ್ರಮಕೈಗೊಳ್ಳಿ: ಗ್ರಾಮ ಪಂಚಾಯಿತಿಯಲ್ಲಿ ಬಾರಿ ಹಣದ ಅವ್ಯವಹಾರ ನಡೆದಿದ್ದು, ಸಂಬಂಧಿಸಿದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಡಿ. ಕದಡಿ, ಮರಿಯಪ್ಪ ಸ್ವಾಗ್ಯಾಳ, ಶರೀಫಸಾಬ್ ಛಬ್ಬಿ, ಪರಸಪ್ಪ ಬಾಲೇಹೊಸೂರ, ಪರಶುರಾಮ ವಡವಿ, ಶಂಕ್ರಪ್ಪ ಪ್ಯಾಟಿ, ಬಸಪ್ಪ ಗದಗ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement