ತೊಗರಿಗೆ ತಟ್ಟಿದ ತೇವಾಂಶ, ಕೀಟಬಾಧೆ
ಕನ್ನಡಪ್ರಭ ವಾರ್ತೆ, ಗದಗ, ಸೆ. 29
ದೇಶಕ್ಕೆ ಅನ್ನ ನೀಡುವ ರೈತನದ್ದು ಈಗ ತ್ರಿಶಂಕು ಸ್ಥಿತಿ. ಒಮ್ಮೆ ಮಳೆ ಬಾರದೆ ಬೆಳೆ ಬೆಳೆಯಲಾಗದೇ ಸಮಸ್ಯೆ ಎದುರಿಸಿದರೆ, ಮತ್ತೊಮ್ಮೆ ಅದೇ ಮಳೆ ಅತಿಯಾಗಿ ಇದ್ದ ಬೆಳೆ ಹಾಳಾಗುವ ಸ್ಥಿತಿ. ಅಂತಹ ಸ್ಥಿತಿ ಮತ್ತೊಮ್ಮೆ ಬಂದೆರಗಿದ್ದು, ಅದು ಜಿಲ್ಲೆಯಲ್ಲಿನ ತೊಗರಿ ಬೆಳೆಗೆ ತಟ್ಟಿದೆ.
ಹೌದು.. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಪರಿಣಾಮ ಅತಿಯಾದ ತೇವಾಂಶ ಮತ್ತು ಕೀಟಬಾಧೆಯಿಂದಾಗಿ ಮುಂಗಾರು ಹಂಗಾಮಿನ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬಿತ್ತನೆ ಮಾಡಿರುವ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಬಿತ್ತನೆ ಪ್ರದೇಶ: ಗದಗ ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 3204 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಗದಗ ತಾಲೂಕಿನಲ್ಲಿ 712 ಹೆಕ್ಟೇರ್, ಮುಂಡರಗಿ ತಾಲೂಕಿನಲ್ಲಿ 526 ಹೆಕ್ಟೇರ್, ನರಗುಂದ ತಾಲೂಕಿನಲ್ಲಿ 185 ಹೆಕ್ಟೇರ್, ರೋಣ ತಾಲೂಕಿನಲ್ಲಿ 681 ಹೆಕ್ಟೇರ್ ಶಿರಹಟ್ಟಿ ತಾಲೂಕಿನಲ್ಲಿ 1100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಅತಿಯಾದ ಮಳೆಯಿಂದ ಬಿತ್ತನೆ ಮಾಡಿರುವ ತೊಗರಿ ಬೆಳೆ ಹಳದಿ ಬಣ್ಣಕ್ಕೆ ತಿರುಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುವ ಸಾಧ್ಯತೆ ಕಡಿಮೆ ಎನ್ನುವುದು ರೈತರ ಅಭಿಪ್ರಾಯ.
ಅಂತರ ಬೇಸಾಯವಾಗಿ ತೊಗರಿ ಬಿತ್ತನೆ: ಕೃಷಿ ಇಲಾಖೆಯ ಮಾಹಿತಿ ಆಧಾರದಲ್ಲಿ 3500 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಪ್ರಮುಖ ಬೆಳೆಯನ್ನಾಗಿ ಬಿತ್ತನೆ ಮಾಡಲಾಗಿದೆ. ಆದರೆ, ಗದಗ ಜಿಲ್ಲೆಯ ರೈತರು ತೊಗರಿ ಬೆಳೆಯನ್ನು ಅಂತರ ಬೇಸಾಯ ಪದ್ದತಿಯಲ್ಲಿ ಹೆಚ್ಚಾಗಿ ಬಿತ್ತನೆ ಮಾಡುವುದರಿಂದ ಬಿತ್ತನೆ ಕ್ಷೇತ್ರದಲ್ಲಿ ಇನ್ನು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಈರುಳ್ಳಿ ಹೊಲಗಳ ಬದುವಿನಲ್ಲಿ ಹಾಗೂ ಬಳ್ಳಿ ಶೇಂಗಾ ಮತ್ತು ಹಬ್ಬು ಶೇಂಗಾ ಹೊಲಗಳ ಬದುವಿನಲ್ಲಿ ತೊಗರಿಯನ್ನು ಹೆಚ್ಚುವರಿ ಬೆಳೆಯಾಗಿ ಬಿತ್ತನೆ ಮಾಡಿದ್ದಾರೆ.
ಅತಿಯಾದ ತೇವಾಂಶ: ತೊಗರಿ ಬೆಳೆಗೆ ಇನ್ನಿತರ ಬೆಳೆಗಿಂತ ಹೆಚ್ಚಿನ ತೇವಾಂಶದ ಅವಶ್ಯಕತೆ ಇರುತ್ತದೆ. ಆದರೆ, ಅದು ಪ್ರಸಕ್ತ ಸಾಲಿನಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳೆಯ ಸ್ವರೂಪವೇ ಬದಲಾಗುತ್ತಿದ್ದು, ಇದರಿಂದ ಬೆಳೆಯ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಉತ್ತಮ ಬೆಳೆ ಎಂದು ಗುರುತಿಸಿಕೊಳ್ಳುವ ಜವಾರಿ ತೊಗರಿ ಬೆಳೆಯು 3ರಿಂದ 4 ಅಡಿ ಎತ್ತರ ಬೆಳೆಯತ್ತದೆ. ಆದರೆ, ಈ ಬಾರಿ ಅತಿಯಾದ ತೇವಾಂಶದದಿಂದ ಹೆಚ್ಚೆಂದರೆ 2.5 ಅಡಿ ಮಾತ್ರ ಬೆಳವಣಿಗೆಯಾಗಿದ್ದು, ಇದರಿಂದ ಇಳುವರಿ ಕುಸಿತವಾಗಲಿದೆ.
ಕೀಟಬಾಧೆಯೂ ವ್ಯಾಪಕ: ಪ್ರತಿ ವರ್ಷವೂ ತೊಗರಿ ಬೆಳೆಯಲ್ಲಿ ಹೂ ಮತ್ತು ಕಾಯಿ ಬಿಡುವ ವೇಳೆ ಕಾಣಿಸಿಕೊಳ್ಳುತ್ತಿದ್ದ ಕೀಟ ಬಾಧೆ ಈ ಬಾರಿ ಇನ್ನು ಬೆಳೆವಣಿಗೆಯ ಹಂತದಲ್ಲಿಯೇ ಕಾಣಿಸಿಕೊಂಡಿದ್ದು, ಕೀಟವು ಬೆಳೆಯಲ್ಲಿನ ಚಿಗುರು ಎಲೆ ತಿಂದು ಹಾಕುವುದರೊಟ್ಟಿಗೆ ದೊಡ್ಡ ಎಲೆಯಲ್ಲಿ ರಂಧ್ರ ಕೊರೆದು ರಸ ಹೀರುವುದರಿಂದ ಅವುಗಳು ಒಣಗಿ ಬೆಳವಣಿಗೆ ಕುಂಠಿತಕ್ಕೆ ಕಾರಣವಾಗಿದೆ.
ಶಿವಕುಮಾರ ಕುಷ್ಟಗಿ